ಸಂಚಿಕೆ ೨: ಎಲ್ಲವೂ ಆನಂದಮಯ !!
ನಾಣಿ ಭಟ್ರ ಪರಿವಾರದ ಕಥೆ ಕೇಳೋಕೆ ಬಂದಿದ್ದೀರಾ? ಇವತ್ತಿನ ಕಥೆ ನಾನು ಹೇಳ್ತೇನೆ ಕೇಳಿ.
ನನ್ನ ಹೆಸರು ಚಿಕ್ಕು. ಇಗೋ ಇಲ್ಲಿ ನನ್ನ ಪಕ್ಕ ದೇವದಾಸ್ ತರಹ ಕೂತಿದ್ದಾನಲ್ಲ ಇವನು ನಿಮಗೆ ಗೊತ್ತಿರಬೇಕಲ್ಲ, ಭಟ್ರ ಕಿರಿಯ ಮಗ ಆನಂದ ಆದರೆ ಇವತ್ತು ಅವನ ಆನಂದ ಮಾಯವಾಗಿದೆ. ಯಾಕೆ ಅಂತೀರಾ? ಇವತ್ತು ಯಾಕೆ ಅಂತ ನನಗೆ ಇನ್ನೂ ಗೊತ್ತಿಲ್ಲ, ಅಮ್ಮ ಮನೆ ಒಳಗಿಂದ ಹೊರಗೆ ಆತಂಕದಲ್ಲಿ ಓಡಾಡ್ತಾ ಇದ್ದಾರೆ. ಯಾಕೆ ಅಂತ ತಿಳೀತಾ ಇಲ್ಲ. ಇವನು ಬೇರೆ ಅಳೋದು ಬಿಟ್ಟು ಎನೂ ಹೇಳ್ತಾ ಇಲ್ಲ.
ಇವತ್ತಿನ ಕಥೆ ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ ಬಿಡಿ. ಅಲ್ಲಿವರೆಗೂ ನೀವು ಆನಂದನ ಹಳೆ ಕಥೆಗಳನ್ನು ಕೇಳಿ. ಇವನು ಪ್ರತಿ ಸರಿ ಏನಾದ್ರೂ ಎಡವಟ್ಟು ಮಾಡಿದಾಗೆಲ್ಲ ಇಲ್ಲೇ ಬಂದು ಕೂರೋದು. ಕೆಲವೊಂದು ಸಾರಿ ನನ್ನ ಹತ್ರ ಹೇಳ್ತಾನೆ ಏನಾಯ್ತು ಅಂತ, ಇಲ್ಲಾಂದ್ರೆ ಆಮೇಲೆ ಅಮ್ಮ ಬಂದು ಮಾತಾಡುತ್ತಿರಬೇಕಾದ್ರೆ ವಿಷಯ ಗೊತ್ತಾಗುತ್ತೆ. ಮೊದ ಮೊದಲು ಇವರು ಮಾತಾಡೋದು ಅರ್ಥನೇ ಆಗುತ್ತ ಇರಲಿಲ್ಲ. ಈಗೀಗ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತ ಇದೆ.
ಹೋದ ವಾರ ದೊಡ್ಡ ಗಲಾಟೆ ಮಾಡಿದ್ದ. ಈ ಮನೇಲಿ ಏನೇ ಗಲಾಟೆ ಆಗೋದಿದ್ರೂ ಅದು ನಡೆಯುವುದು ಈ ಅಂಗಳದಲ್ಲಿ. ಯಾಕೇಂದ್ರೆ ಭಟ್ರು ಜಾಸ್ತಿ ಸಮಯ ಕಳೆಯೋದೇ ಈ ಜಗಲಿ ಮೇಲೆ ಕೂತು. ಅಮ್ಮ ಕಂಪ್ಲೇಂಟ್ ತಗೊಂಡು ಅಂಗಳಕ್ಕೆ ಬಂದು ಬಿಡ್ತಾರೆ. ಹಾಗಾಗಿ ನಂಗೂ ಎಲ್ಲ ವಿಷಯ ಗೊತ್ತಾಗೋದು. ಆ ದಿನ ಸಂಜೆ ಯಾವತ್ತಿನಂತೆ ಭಟ್ರು ಜಗಲಿ ಮೇಲೆ ಸೊಳ್ಳೆ ಹೊಡೀತಾ ಕೂತಿದ್ದರು. ಅಮ್ಮ ಒಳಗಿಂದ ಒಂದು ಕೈಯ್ಯಲ್ಲಿ ದೇವರ ಫೋಟೋ ಹಾಗೆ ಮತ್ತೊಂದು ಕೈಯ್ಯಲ್ಲಿ ದೀಪ ಹಿಡಿದುಕೊಂಡು ಓಡೋಡಿ ಬಂದರು.
"ನೋಡಿ ನಿಮ್ಮ ಮಗ ಏನು ಮಾಡಿದ್ದಾನೆ ಅಂತ !!" ಅಂತ ಹೇಳುತ್ತಾ ಫೋಟೋನ ತಿರುಗಿಸಿ ಭಟ್ರ ಕಡೆಗೆ ತೋರಿಸಿದರು.
ಭಟ್ರಿಗೆ ಏನು ಕಂಡಿತೋ ಗೊತ್ತಿಲ್ಲ ಆದ್ರೆ ಅವರು ಕೂತವರು ಎದ್ದು ನಿಂತರು. "ಅಯ್ಯೋ ದೇವರೇ!! ಏನಿದು ಇಷ್ಟೊಂದು ದೊಡ್ಡ ಗುಂಡಿ ಬಿದ್ದಿದೆ." ಆವಾಗ್ಲೇ ನಾನು ನೋಡಿದ್ದು ಫೋಟೋ ಹಿಂದುಗಡೆ ದೊಡ್ಡ ರಂಧ್ರನೇ ಇದೆ. ಆದರೆ ಅಷ್ಟಕ್ಕೇ ಇಷ್ಟೊಂದು ಗಾಬರಿ ಯಾಕೆ ಅಂತ ಗೊತ್ತಾಗಲಿಲ್ಲ. ಪಾಪ ಭಟ್ರು ಬೇರೆ ದೇವರಿಗೆ ಕೇಳ್ತಾ ಇದ್ದಾರೆ ದೇವರಿಗೆ ಗುಂಡಿ ಯಾಕೆ ಬಿದ್ದಿದೆ ಅಂತ. ಈ ಮನೆಯವರೆಲ್ಲ ಹಾಗೆ, ತುಂಬಾ ಗಾಬರಿಯಾದಾಗಲೆಲ್ಲಾ ದೇವರ ಹತ್ರ ಮಾತಾಡ್ತಾರೆ. ಆದರೆ ದೇವರು ಯಾವತ್ತು ಉತ್ತರ ಕೊಡೋದು ನೋಡಿಲ್ಲ.
"ಬಾರೋ ಇಲ್ಲಿ ! ಹೇಳು ಏನು ಮಾಡಿದೆ ಅಂತ" ಅಂತ ಅಮ್ಮ ಜೋರಾಗಿ ಕರೆದ್ರು. ಒಳಗಿಂದ ಆನಂದ ತಲೆ ತಗ್ಗಿಸುತ್ತ ಮೆಲ್ಲನೇ ನಡೆದು ಬಂದ. ಅಮ್ಮ ಕೋಪದಲ್ಲಿ ದೀಪದ ಕೈಯ್ಯಲ್ಲೇ ಒಂದೇಟು ಕೊಡೋಕ್ಕೆ ಹೋದ್ರು. ದೀಪದೆಣ್ಣೆ ಪಾಪ ಭಟ್ರ ಮೈ ಮೇಲೆ ಹಾರಿತು. ಆನಂದ ಹೇಗೋ ತಪ್ಪಿಸಿಕೊಂಡು ನನ್ಹತ್ರ ಬಂದು ಕೂತುಕೊಂಡ.
ಭಟ್ರು ಎಣ್ಣೆ ಮೈಮೇಲೆ ಬಿದ್ದಿದ್ದಕ್ಕೆ ಇನ್ನೂ ಸಿಟ್ಟಾದ್ರು. ಅಮ್ಮನಿಗೆ ಬೈಲಿಲ್ಲ ಆದರೆ. ಬದಲಾಗಿ ಆನಂದನ ಕಡೆಗೆ ಸಿಟ್ಟಿನಲ್ಲಿ " ಏನಾದ್ರೂ ಕಿತಾಪತಿ ಮಾಡ್ತಾನೆ ಇರ್ತೀಯಲ್ಲ ನೀನು."
ಇವರೆಲ್ಲರ ಗಲಾಟೆ ಕೇಳಿ ಹರ್ಷನೂ ಹೊರಗೆ ಓಡಿ ಬಂದ.
ಅಮ್ಮ ಮುಂದುವರಿಸಿದರು "ದೀಪ ಹಚ್ಚುವ ಅಂತ ದೇವರ ಸ್ಟಾಂಡ್ ಹತ್ರ ಹೋದರೆ ದೀಪ ಕಾಣ್ತಾ ಇಲ್ಲ. ಎಲ್ಲಾ ಕಡೆ ಹುಡುಕಿದ್ರೂ ಸಿಗಲಿಲ್ಲ. ಯಾಕೋ ಇರಲಿ ಅಂತ ದೇವರ ಫೋಟೋ ತಗೆದು ನೋಡಿದ್ರೆ ಅಲ್ಲಿದೆ. ಆವಾಗ್ಲೆ ನೋಡಿದ್ದು ಈ ರಂಧ್ರನ. ಇವನಿಗೆ ಸ್ವಲ್ಪವೂ ಬೆಳಕಿದ್ರೆ ನಿದ್ದೆ ಬರೋಲ್ವಂತೆ. ಅದಕ್ಕೆ ನಿನ್ನೆ ದೀಪನ ಫೋಟೋ ಹಿಂದೆ ಇಟ್ಟುಬಿಟ್ಟಿದ್ದಾನೆ ಪುಣ್ಯಾತ್ಮ ! ಪುಣ್ಯಕ್ಕೆ ಫೋಟೋ ಪೂರ್ತಿ ಬೆಂಕಿ ಹತ್ಕೊಂಡಿಲ್ಲ."
ಹರ್ಷ ನಗುತ್ತ ನುಡಿದ "ಬಿಟ್ರೆ ಇವನು ಮನೆಗೆ ಬೆಂಕಿ ಇಡ್ತಾನೆ." ಹರ್ಷನ ಮುಖದಲ್ಲಿ ಗಾಬರಿ ಇರಲಿಲ್ಲ. ಬದಲಾಗಿ ನಗು. ಆನಂದನಿಗೆ ಬೈದಾಗೆಲ್ಲ ಅವನ ಮುಖದಲ್ಲಿ ನಗು ಇರುತ್ತದೆ. ಆನಂದ ಮುಖಯೆತ್ತಿ ಹರ್ಷನ ಕಡೆಗೆ ಸಿಟ್ಟಿನಿಂದ ನೋಡಿದ. ಅಮ್ಮ ಹರ್ಷನ ಕಡೆಗೆ "ನೀನೇನು ನಗ್ತೀಯಾ? ಅವನಿಗೇನೋ ಬುದ್ಧಿ ಇಲ್ಲ. ನೀನಾದರೂ ನೋಡೋದು ಬೇಡ್ವಾ? ಒಟ್ಟಿಗೆ ಮಲಗ್ತೀರಾ ಇಬ್ರು."
ಹರ್ಷ "ಅಯ್ಯೋ ನಂಗೆ ವಿಷಯನೇ ಗೊತ್ತಿಲ್ಲ. ಗೊತ್ತಿದ್ರೆ ಬಿಡುತ್ತಿದ್ನಾ"
ಹಾಗೋ ಹೇಗೋ ನಾಣಿ ಭಟ್ರು ಅಮ್ಮನನ್ನು ಸಮಾಧಾನ ಮಾಡಿದರು. ಆನಂದನಿಗೆ ನೋವಾದರೆ ನನಿಗೂ ಬೇಜಾರು. ಅದಕ್ಕೆ ನಾನು ಅವನನ್ನು ಸಮಾಧಾನ ಮಾಡಿದೆ. ಕೆಲವೇ ಕ್ಷಣಗಳಲ್ಲಿ ಅವನ ಚಿಂತೆಯೆಲ್ಲ ಮಾಯವಾಯಿತು. ನಾವಿಬ್ರೂ ಚೆಂಡಾಟ ಆಡಿದೆವು.
ಇನ್ನೂ ಹೇಳಬೇಕಂದ್ರೆ, ಆನಂದ ಮತ್ತು ಅಮ್ಮನ ನಡುವೆ ಇಂತಹ ಜಗಳ ಮಾಮೂಲು. ಉಪ್ಪಿಟ್ಟು ಅಥವಾ ಉದ್ದಿನ ದೋಸೆ ಮಾಡಿದಾಗಲೆಲ್ಲಾ ಆನಂದ ಮತ್ತೆ ಅಮ್ಮನ ನಡುವೆ ವಾದ ನಡೆಯುತ್ತಲೇ ಇರುತ್ತದೆ. ಆದರೆ ಆ ಜಗಳ ಆದಾಗೆಲ್ಲ, ಅವನ ಪಾಲಿನ ತಿಂಡಿ ನನಿಗೆ ತಂದು ಕೊಡ್ತಾರೆ ಅಮ್ಮ. "ನೀನಾದ್ರೂ ತಿನ್ನು ಮಗ" ಅಂತ ಹೇಳ್ತಾರೆ.
ಮತ್ತೊಂದು ಸಲ ಏನಾಯ್ತು. ಆನಂದ ಸಂಜೆ ಚೆಂಡಾಟ ಆಡಲು ಕಾರ್ಜಾಲು ಗದ್ದೆಗೆ ಹೋಗುತ್ತಿದ್ದ. ನನ್ನನ್ನು ಕರೆದುಕೊಂಡು ಹೋಗೋದಿಲ್ಲ ಅವನು ಈ ಚೆಂಡಾಟಕ್ಕೆ. ಯಾಕೋ ಗೊತ್ತಿಲ್ಲ. ಆವತ್ತಿನ ದಿನ ಅವನು ಸುಮಾರು ಹೊತ್ತಾದರೂ ಮನೆಗೆ ಬರಲೇ ಇಲ್ಲ. ಅಮ್ಮ ಯಾಕೋ ಗಾಬರಿಯಾಗತೊಡಗಿದರು. ಸಮಾಧಾನ ಮಾಡಲು ಹರ್ಷನೂ ಮನೇಲಿ ಇಲ್ಲ, ನಾಣಿ ಭಟ್ರು ಕೂಡ ಕಾರ್ಖಾನೆಗೆ ಹೋದವರು ಬಂದಿರಲಿಲ್ಲ. ಕತ್ತಲಾದಂತೆ ಅವರ ಆತಂಕ ಬಿಗಿಯಾಯಿತು. ಅಷ್ಟರಲ್ಲಿ ಹರ್ಷ ಮನೆಗೆ ಬಂದ. ಅಮ್ಮ ಮತ್ತು ಹರ್ಷ ಏನೋ ಮಾತುಕತೆ ಮಾಡಿದರು ಮತ್ತು ಇಬ್ಬರೂ ಸೇರಿ ಗದ್ದೆ ಕಡೆ ಹೋದರು. ನಾಣಿ ಭಟ್ರು ಮನೆಗೆ ಬಂದವರು ಮನೆಗೆ ಬೀಗ ಹಾಕಿರೋದು ಕಂಡು ಜಗಲಿ ಮೇಲೆ ಕಾಯುತ್ತ ಕುಳಿತರು. ನನ್ನ ಕಂಡು ದೂರದಿಂದಲೇ ಕೇಳಿದರು "ಎಲ್ಲಿ ಹೋಗಿದೆ ಅಮ್ಮ ಮಕ್ಕಳ ಸೈನ್ಯ? ನಿನ್ನನ್ನು ಕರ್ಕೊಂಡು ಹೋಗಿಲ್ವಾ?" ಆದರೆ ನನ್ನ ಉತ್ತರಕ್ಕೆ ಕಾಯಲಿಲ್ಲ. ಅವರಷ್ಟಕ್ಕೆ ಸೊಳ್ಳೆ ಹೊಡೀತಾ ಕೂತರು. ಅರ್ಧ ಘಂಟೆಯಾದ ಮೇಲೆ ಅಮ್ಮ ಮತ್ತು ಹರ್ಷ ಮನೆಗೆ ಬಂದರು.
ಅಮ್ಮ ಗಾಬರಿಯಿಂದ "ಆನಂದ ಇನ್ನೂ ಮನೆಗೆ ಬಂದಿಲ್ವಾ?" ಅಂತ ಕೇಳಿದರು.
ನಾಣಿ ಭಟ್ರು "ಇಲ್ಲ. ಬಾಗಿಲು ಮುಚ್ಚಿತ್ತು ನಾನು ಬಂದಾಗ. ನೀವ್ಯಾರೂ ಕಾಣಲಿಲ್ಲ ಅಂತ ಇಲ್ಲೇ ಕೂತಿದ್ದೆ. ಯಾಕೆ ಏನಾಯ್ತು?"
ಹರ್ಷ "ಕ್ರಿಕೆಟ್ ಆಡ್ಲಿಕ್ಕೆ ಹೋದವನು ಇನ್ನೂ ಬಂದಿಲ್ಲ. ಅವನ ಫ್ರೆಂಡ್ಸಿಗೆ ಕೇಳಿದ್ರೆ ಆವಾಗ್ಲೇ ಹೊರಟ ಅಂತ ಹೇಳಿದ್ರು."
ನಾಣಿ ಭಟ್ರು "ಇಲ್ಲೇ ಎಲ್ಲೋ ಇರಬೇಕು. ಬರ್ತಾನೆ ಬಿಡಿ."
ಆದರೆ ಅಮ್ಮನಿಗೆ ಸಮಾಧಾನವಾಗಲಿಲ್ಲ. ಅಮ್ಮ ಅಂದ್ರು "ತುಂಬಾ ಕತ್ತಲೆ ಆಗಿದೆ. ಈ ಕತ್ತಲೆಯಲ್ಲಿ ಬೇರೇನು ಕೆಲಸ ಅವನಿಗೆ"
ಅಷ್ಟರಲ್ಲಿ ಇವರ ಮಾತುಕತೆ ಕೇಳಿ ಪಕ್ಕದ ಮನೆ ಶೆಟ್ರಮ್ಮ ಬಂದು ವಿಚಾರಿಸಿದರು. ಆನಂದ ಕಾಣೆಯಾಗಿರುವುದನ್ನು ಕೇಳಿ ಜೋರಾಗಿ ನಕ್ಕರು. "ಆನಂದ ಇಲ್ಲೇ ಇದ್ದಾನಲ್ಲ. ಈಗಷ್ಟೇ ಪಕ್ಕದ ಮನೆ ಗೀತಮ್ಮನ ಮನೆಯಿಂದ ಬಂದೆ. ಅಲ್ಲೇ ಕ್ಯಾರಮ್ ಆಡ್ತಿದ್ದಾನೆ ನನ್ನ ಮಗನ ಜೊತೆ. ಸುಶೀಲಮ್ಮಾ ನಿಮಗೆ ಹೇಳಿ ಹೋಗಿಲ್ವಾ ಅವನು?"
ಅಮ್ಮನಿಗೆ ಕೋಪ ಬಂತು. ಹೋಗಿ ಅವನ ಕಿವಿ ಹಿಡಿದು ಎಳೆದುಕೊಂಡು ಬಂದರು. "ನಿನ್ನ ಹುಡುಕಿ ಊರೆಲ್ಲ ಸುತ್ತಿ ಬಂದ್ವಿ. ಹೇಳಿ ಹೋಗಬೇಕನ್ನೋ ಪರಿಜ್ಞಾನ ಇಲ್ಲ"
ಆನಂದನಿಗೆ ಆಶ್ಚರ್ಯ, ಮುಜುಗರದ ಜೊತೆಗೆ ಕೋಪನೂ ಬಂತು. "ಅರೆ ! ಪಕ್ಕದ ಮನೆಗೆ ಹೋಗ್ಲಿಕ್ಕೆ ಎಂತ ಕೇಳೋದು. ನೀವು ಕೂಗಿದ್ದಿದ್ರೆ ನನಗೆ ಅಲ್ಲಿ ಕೇಳ್ತಿತ್ತು. ಅಷ್ಟಕ್ಕೂ ಈ ಕತ್ತಲೆಯಲ್ಲಿ ನನಿಗೇನು ಬೇರೆ ಕೆಲಸ ಹೊರಗಡೆ."
ನಾಣಿ ಭಟ್ರು ಒಮ್ಮೆ ನಕ್ಕರು. "ನೀನುಂಟು, ನಿನ್ನ ಮಗನುಂಟು. ಒಳ್ಳೆ ಜೋಡಿ." ಅಮ್ಮ ಮಾತಾಡಲಿಲ್ಲ. ಸುಮ್ಮನೆ ಮನೆಯೊಳಗೆ ಹೋದರು. ಹರ್ಷ ಜೋರಾಗಿ ನಗುತ್ತಿದ್ದ ಆನಂದನ ಕೆಂಪು ಕಿವಿ ಮೇಲೆ ಬೆರಳಿಡುತ್ತ.
ಹೀಗೆ ಇನ್ನೂ ಸುಮಾರು ಕಥೆಗಳಿವೆ. ನಿಮಗೆ ಕಥೆ ಹೇಳುವಷ್ಟರಲ್ಲಿ ಇವತ್ತಿನ ಘಟನೆ ಗೊತ್ತಾಗಿದೆ. ಏನಾಯ್ತು ಅಂದ್ರೆ, ಇವತ್ತು ಬೆಳಿಗ್ಗೆ ಸ್ಕೂಲಿಗೆ ಹೋದವನು ಬೇಗನೇ ವಾಪಾಸು ಬಂದ. ನಗುತ್ತ ಹೋದವನು ವಾಪಾಸು ಬಂದಾಗ ತುಂಬ ಚಿಂತೆಯಲ್ಲಿದ್ದ. ನಾನೂ ತುಂಬಾ ಸಮಾಧಾನ ಮಾಡಲು ಪ್ರಯತ್ನಿಸಿದೆ ಆದರೆ ಅವನ ಚಿಂತೆ ದೂರವಾಗಲೇ ಇಲ್ಲ.
ಅಷ್ಟರಲ್ಲಿ ನಾಣಿ ಭಟ್ರು ಮನೆಯತ್ತ ವೇಗವಾಗಿ ನಡೆಯುತ್ತ ಬಂದರು. ಅಮ್ಮನೂ ಹೊರಗೆ ಬಂದು ಭಟ್ರ ಹತ್ರ ತುಂಬಾ ಗಾಬರಿಯಾಗಿ ಮಾತನಾಡತೊಡಗಿದರು "ಹಾಲ್ ಟಿಕೆಟ್ ಕಳ್ಕೊಂಡಿದ್ದಾನೆ ನೋಡಿ. ಪರೀಕ್ಷೆಗೆ ಬರೇ ಒಂದೇ ಘಂಟೆ ಇದೆ. ಕೇಳಿದ್ರೆ ಕಂಪಾಸಲ್ಲಿ ಇಟ್ಟಿದ್ದ ಅಂತ ಹೇಳ್ತಾನೆ. ಸ್ಕೂಲ್ ಬ್ಯಾಗ್ ಎಲ್ಲ ಹುಡುಕಿ ಆಯ್ತು. ಮನೆಯಲ್ಲೂ ಎಲ್ಲಾ ಕಡೆ ಹುಡುಕಿದ್ದೀನಿ, ಎಲ್ಲೂ ಸಿಗ್ತಾ ಇಲ್ಲ. ಹರ್ಷನ ಕಳಿಸಿದ್ದೀನಿ ದಾರಿಯಲ್ಲಿ ಎಲ್ಲಾದ್ರೂ ಬೀಳಿಸಿಕೊಂಡಿದ್ದಾನೋ ಅಂತ ನೋಡೋಕ್ಕೆ. ಸಿಕ್ಕಿಲ್ಲಾಂದ್ರೆ ಪರೀಕ್ಷೆ ಬರಿಯೋಕೆ ಬಿಡ್ತಾರಾ? ನೀವು ಅವನೊಟ್ಟಿಗೆ ಹೋಗಿ ಟೀಚರ್ ಹತ್ರ ಮಾತಾಡಿ ನೋಡಿ. ಬೇಕಾದ್ರೆ ಪಾಪಮ್ಮನನ್ನೂ ಕರೆದುಕೊಂಡು ಹೋಗಿ"
ನಾಣಿ ಭಟ್ರು ಅಮ್ಮನಷ್ಟು ಗಾಬರಿಗೊಂಡಿರಲಿಲ್ಲ. ಆನಂದನ ಬಳಿ ಬಂದು ಕುಳಿತರು. "ನೆನಪು ಮಾಡ್ಕೋ ಎಲ್ಲಿಟ್ಟಿದ್ದೀಯಾ ಅಂತ."
ಆನಂದ "ದಿನಾಗ್ಲೂ ಕಂಪಾಸಲ್ಲೇ ಇಡುತ್ತಿದ್ದೆ ಅಪ್ಪಾ. ಇವತ್ತು ಪರೀಕ್ಷೆ ಸೆಂಟರಿಗೆ ಹೋಗೋ ಮೊದಲು, ಟೀಚರ್ ಹಾಲ್ ಟಿಕೆಟ್ ಚೆಕ್ ಮಾಡಿ ಅಂತ ಹೇಳಿದಾಗ ನೋಡಿದ್ರೆ ಕಾಣ್ತಾ ಇಲ್ಲ. ನೆನಪಿಗೆ ಬರ್ತಾ ಇಲ್ಲ ಬೇರೆಲ್ಲಿ ಇಟ್ಟಿದ್ದೀನೋ ಅಂತ. ಅಮ್ಮನತ್ರ ಕೊಡಬೇಕಾಗಿತ್ತು, ಅಮ್ಮನೂ ಹೇಳ್ತಾ ಇದ್ದರು ಅವರ ಹತ್ರ ಇಟ್ಕೋತೀನಿ ಅಂತ."
ಅಷ್ಟರಲ್ಲಿ ಹರ್ಷನೂ ಬಂದ. ತುಟಿ ಹೊರಗೆ ಹಾಕಿ ತಲೆ ಅಲ್ಲಾಡಿಸಿದ. ಅಮ್ಮನ ಗಾಬರಿ ಇನ್ನೂ ಜಾಸ್ತಿಯಾಯಿತು. ನಾಣಿ ಭಟ್ರು "ಸರಿ ಹಾಗಾದ್ರೆ ಟೀಚರ್ ಹತ್ರ ಮಾತಾಡೋಣ. ಬಾ !" ಅಂದರು.
ಅಮ್ಮ ಅಷ್ಟರಲ್ಲಿ "ಇರಿ ಇರಿ ಒಂದು ನಿಮಿಷ. ಆನಂದ ಬಾ ದೇವರಿಗೆ ನಮಸ್ಕಾರ ಮಾಡಿ ಹೋಗುವಂತೆ." ಅಂತ ಹೇಳಿ ಆನಂದನನ್ನು ಒಳಗೆ ಕರೆದುಕೊಂಡು ಹೋದರು.
ನಾಣಿ ಭಟ್ರು ಹರ್ಷನೆಡೆಗೆ "ಹಾಲ್ ಟಿಕೆಟ್ ಇಲ್ಲಾಂದ್ರೂ ಪರೀಕ್ಷೆ ಬರಿಯೋಕೆ ಬಿಡಬೇಕಲ್ವಾ?" ಅಂತ ಅನುಮಾನವಾಗಿ ಕೇಳಿದರು. ಹರ್ಷ "ಅದು ಹೇಗೆ ಬಿಡೋಲ್ಲ. ಹೆಡ್ ಮಿಸ್ ನೋಡ್ಕೋತಾರೆ ಹೆದರಬೇಡಿ. ಒಂದೇ ಸಣ್ಣ ಸಮಸ್ಯೆ ಏನಂದ್ರೆ ಪರೀಕ್ಷೆ ಸೆಂಟರ್ ಪೇಟೆಯಲ್ಲಿರೋ ದೊಡ್ಡ ಸ್ಕೂಲಲ್ಲಿ. ನಾನು ಶಾಲೆ ಹತ್ರ ಹೋದಾಗ ಸ್ಕೂಲ್ ಬಸ್ಸು ರೆಡಿ ಇತ್ತು ಹೊರಡೋಕ್ಕೆ. ಜಾಸ್ತಿ ಹೊತ್ತು ಕಾಯೋಲ್ಲ ಅವರು ಇವನೊಬ್ನಿಗೋಸ್ಕರ. ಮಿಸ್ ಆದ್ರೆ ಆಮೇಲೆ ನಾವೇ ಅಲ್ಲಿಗೆ ಹೋಗಬೇಕಾಗುತ್ತೆ. ಸುಮ್ಮನೆ ಟೈಮ್ ವೇಷ್ಟ್ ಅಷ್ಟೇ."
ನಾಣಿ ಭಟ್ರು "ಏ ಆನಂದ ಬೇಗ ಬಾ" ಅಂತ ಕಿರುಚಿದರು. ಅಷ್ಟರಲ್ಲಿ ಅಮ್ಮ ಮತ್ತು ಆನಂದ ಕುಷಿ ಕುಷಿಯಾಗಿ ಓಡಿ ಬಂದರು. ಅಮ್ಮ ನಗುತ್ತ "ದೇವರ ದಯೆ ನೋಡಿ. ದೇವರ ಹತ್ರ ಬೇಡ್ಕೊಳ್ಳುತ್ತಿದ್ದಂತೆ ಇವನಿಗೆ ನೆನಪಾಯಿತು, ಹಾಲ್ ಟಿಕೆಟ್ ದೇವರ ಫೋಟೋ ಹಿಂದೆ ಇಟ್ಟು ಬಿಟ್ಟಿದ್ದಾನೆ ಅಂತ. ದೇವರೇ ತೋರಿಸಿಕೊಟ್ಟರು."
ಆನಂದ "ಶುಕ್ರವಾರ ಸ್ನಾನಕ್ಕೆ ಹೋಗೋ ಗಡಿಬಿಡಿಯಲ್ಲಿ ಫೋಟೋ ಹಿಂದೆ ಇಟ್ಟಿದ್ದೆ." ಅಂತ ಹಲ್ಲು ಕಿಸಿಯುತ್ತ ಸಮಜಾಯಿಷಿ ಕೊಟ್ಟ. ಅವನ ಕೈಯ್ಯಲ್ಲಿ ಸಣ್ಣ ಪೇಪರೊಂದು ನೋಡಿದೆ. ಇದಕ್ಕೆ ಯಾಕೆ ಅಷ್ಟೊಂದು ಗಾಬರಿಯಾದರೋ ಗೊತ್ತಾಗಲಿಲ್ಲ.
ಎಲ್ರೂ ಒಂದು ಸಲ ನಿಟ್ಟುಸಿರು ಬಿಟ್ಟರು. "ಸರಿ ಸರಿ ಬಾ ! ಬಸ್ ಮಿಸ್ಸಾದರೆ ಕಷ್ಟ" ಅಂತ ನಾಣಿ ಭಟ್ರು ಅವಸರ ಪಟ್ಟರು. ಅದಾದ ಮೇಲೆ ನಾಣಿ ಭಟ್ರು ಮತ್ತು ಹರ್ಷ ಸ್ವಲ್ಪ ಹೊತ್ತಾದ ಬಳಿಕ ವಾಪಾಸು ಬಂದರು. ಅಮ್ಮ ಹೊರಗೆ ಕೂತಿದ್ದರು ಕಾಯುತ್ತ. ಭಟ್ರು ಬಂದೊಡನೆ ಹೇಳಿದರು "ಬಸ್ಸು ಇನ್ನೇನು ಹೊರೊಡೋದಿತ್ತು. ಸರಿಯಾದ ಸಮಯಕ್ಕೆ ಮುಟ್ಟಿದ್ವಿ." ಅಮ್ಮನ ಮುಖದಲ್ಲಿ ನಗು ಕಂಡಿತು.
ಈಗ ಮಧ್ಯಾಹ್ನ ಆಗಿದೆ. ಬೆಳಿಗ್ಗೆಯಿಂದ ಆನಂದನ ವಿಚಾರವೇ ಚರ್ಚೆಯಾಗುತ್ತಿತ್ತು. ಯಾಕೋ ಗೊತ್ತಿಲ್ಲ. ಆನಂದ ವಾಪಸು ಬಂದಾಗ ಮತ್ತೆ ಅದೇ ವಿಚಾರ ಚರ್ಚೆಯಾಯಿತು. ಆದರೆ ಈ ಸಲ ಯಾರ ಮುಖದಲ್ಲೂ ಗಾಬರಿ ಇರಲಿಲ್ಲ. ಅಂತೂ ಇಂತೂ ದೇವರು ಕೂಡ ಮಾತಾಡಿದರು ಅನಿಸುತ್ತೆ ಯಾಕೆಂದರೆ ಅಮ್ಮನ ಪ್ರಕಾರ ಹಾಲ್ ಟಿಕೆಟ್ ತೋರಿಸಿಕೊಟ್ಟಿದ್ದೇ ದೇವರು.
ಎಲ್ರೂ ಜಗಲಿಯಲ್ಲಿ ಕೂತಿದ್ದರು ಆನಂದ ಬಂದಾಗ. ಅಮ್ಮ "ಮೊದ್ಲು ಹಾಲ್ ಟಿಕೆಟ್ ನನ್ನ ಕೈಗೆ ಕೊಡು. ಇಲ್ಲಾಂದ್ರೆ ಇನ್ನೆಲ್ಲಾದ್ರು ಇಟ್ಟು ಮರೆತು ಬಿಡ್ತೀಯಾ"
ಆನಂದ ಅಂದ "ಇನ್ನು ನೀನೇ ಇಟ್ಟುಕೊ ಅದನ್ನು. ಇವತ್ತು ಕೊನೆ ಪರೀಕ್ಷೆ ಇದ್ದಿದ್ದು."
ಅಮ್ಮ "ಓ ಹೌದಲ್ಲ. ಮರೆತೇ ಬಿಟ್ಟಿದ್ದೆ"
ನಾಣಿ ಭಟ್ರು "ಇವನು ಆವತ್ತಿನ ಹಾಗೆ ನಿನ್ನೆ ದೀಪನ ಫೋಟೋ ಹಿಂದೆ ಇಟ್ಟಿದ್ದರೆ, ಹಾಲ್ ಟಿಕೆಟ್ ಸುಟ್ಟು ಬೂದಿ ಮಾತ್ರ ಸಿಕ್ಕಿರೋದು. ಆವಾಗ ಅಮ್ಮ ಹೇಳಿದಂತೆ ಪಾಪಮ್ಮನನ್ನೇ ಕರ್ಕೊಂಡು ಹೋಗಬೇಕಾಗಿದ್ದೀತು." ಎಲ್ಲರೂ ಜೋರಾಗಿ ನಕ್ಕರು.
ಹರ್ಷ ಅಂದ "ಪಾಪಮ್ಮ ಹೋಗಿದ್ದಿದ್ದರೆ ಬೇರೆನೆ ರಾದ್ಧಾಂತನೇ ಆಗಿರೋದು. ಅವರಿಗೂ ಹೆಡ್ ಮಿಸ್ಸಿಗೂ ಆಗಿ ಬರೋಲ್ಲ"
ನಾಣಿ ಭಟ್ರು "ಹೌದಾ ! ಯಾಕೆ?" ಅಂತ ಕೇಳಿದರು.
ಹರ್ಷ ವಿವರಿಸಿದ "ಓ ! ನಿಮಗೆ ಗೊತ್ತಿಲ್ವಾ? ಆ ಹೆಡ್ ಮಿಸ್, ಹೆಡ್ ಮಿಸ್ ಆಗೋ ಮೊದಲು ಇಂಗ್ಲೀಷ್ ಟೀಚರ್ ಆಗಿದ್ರು. ಪಾಪಮ್ಮನ ಮಗ ಸಂದೇಶ ಅವರ ಕ್ಲಾಸಲ್ಲೆ ಇದ್ದಿದ್ದು. ಸುಮಾರು ವರ್ಷಗಳ ಹಿಂದೆ, ಆ ಮಿಸ್ ಇಂಗ್ಲೀಷ್ ಕಲಿಯೋಕ್ಕೆ ಸುಲಭ ಆಗುತ್ತೆ ಅಂತ ಮಕ್ಕಳಿಗೆಲ್ಲ ಮನೆಯಲ್ಲಿ, ಗೆಳೆಯರ ಜೊತೆ ಇಂಗ್ಲೀಷಲ್ಲೇ ಮಾತಾಡಿ ಅಂತ ಹೇಳಿ ಕಳಿಸಿದ್ರಂತೆ. ಸಂದೇಶ ಮನೆಯಲ್ಲಿ ಪಾಪಮ್ಮನ ಹತ್ರ ಇಂಗ್ಲೀಷಲ್ಲಿ ಮಾತಾಡೋಕೆ ಶುರು ಮಾಡಿದ್ದೇ ತಡ, ಪಾಪಮ್ಮ ಶಾಲೆಗೆ ಬಂದು ಆ ಮಿಸ್ಸಿಗೆ ಬಂದು ಬೈದಿದ್ದಾರೆ. ನೀವೇನೇ ಇಂಗ್ಲೀಷ್ ಕಲಿಸೋದಿದ್ದರೂ ಅದನ್ನ ಕ್ಲಾಸಲ್ಲಿ ಮಾತ್ರ ಇಟ್ಟುಕೊಳ್ಳಿ. ಹೊರಗಡೆ ಕಲಿಯೋ ಅಗತ್ಯ ಏನೂ ಇಲ್ಲ. ಅಷ್ಟಕ್ಕೂ ಆ ವಿಚಿತ್ರ ಭಾಷೆ ಕಲಿಯೋ ಅಗತ್ಯನೂ ಯಾಕೋ ಗೊತ್ತಿಲ್ಲ. ಏನೋ ಬರೀತಾರೆ, ಏನೋ ಓದುತ್ತಾರೆ. ಓದೋಕೆ ಕಷ್ಟ ಅನಿಸಿದ್ರೆ ಅಕ್ಷರನೇ ಸೈಲೆಂಟ್ ಅಂದು ಬಿಡ್ತಾರೆ. ಸೈಲೆಂಟ್ ಮಾಡೋದಿದ್ರೆ ಯಾಕೆ ಇಡಬೇಕು ಅಂತ ಹೀಗೆ ಇನ್ನೂ ಕೆಲವು ಇಂಗ್ಲೀಷಿನ ಚರಿತ್ರೆ ತೆಗೆದಿಟ್ಟಳು. ಆ ಮಿಸ್ಸಿಗೆ ಪಾಪ ಏನು ಹೇಳೋದು ಅಂತಲೇ ಗೊತ್ತಾಗಲಿಲ್ಲ"
ಎಲ್ಲರೂ ನಕ್ಕರು. ಹರ್ಷ ಮುಂದುವರಿಸಿದ "ಆದರೂ ಆ ಸಂದೇಶ ಇಂಗ್ಲೀಷ್ ಕಲಿತೇ ಬಿಟ್ಟ. ಇಂಜಿನಿಯರೂ ಆದ. ಅಮೇರಿಕಾ ಹೋಗಿ ಸೆಟ್ಲಾದ. ಅದಾದ ಮೇಲೆ ಪಾಪಮ್ಮ ಆ ಮಿಸ್ ಸಿಕ್ಕಾಗೆಲ್ಲ ಒಂದೇ ರಾಗ ಹಾಡುತ್ತಿದ್ದಾಳೆ. ನೀವೇನೋ ಅವನಿಗೆ ಇಂಗ್ಲೀಷ್ ಕಲಿಸಿ ಕೊಟ್ಟು ಫಾರಿನ್ ಹೋಗುವಂತೆ ಮಾಡಿದ್ರಿ. ಇರೋ ಒಬ್ಬ ಮಗನೂ ಈಗ ಅಲ್ಲಿ ಹೋಗಿ ಕೂತಿದ್ದಾನೆ. ಮೊದಲು ವರ್ಷಕ್ಕೆ ಒಂದು ಸಲ ಆದ್ರೂ ಮುಖ ತೋರಿಸುತ್ತಿದ್ದ. ಈಗ ೫ ವರ್ಷದಿಂದ ಅದೂ ನಿಂತುಬಿಟ್ಟಿದೆ. ಅವನ ಮಕ್ಕಳು ಬೇರೆ ಸಾಲದ್ದಕ್ಕೆ ಈ ಮುದುಕಿಗೆ ಅರ್ಥ ಆಗದೇ ಇರೋ ಇನ್ನೂ ವಿಚಿತ್ರ ಇಂಗ್ಲೀಷಲ್ಲಿ ಮಾತಾಡುತ್ತಾವೆ ಅಂತ ಮಿಸ್ ಹತ್ರ ದೂರು ಕೊಡ್ತಾ ಇರ್ತಾಳೆ. ಆ ಮಿಸ್ ಈಗ ಪಾಪಮ್ಮ ಕಂಡರೆ ಬಚ್ಚಿಟ್ಟುಕೊಳ್ಳುತ್ತಾಳೆ."
ಎಲ್ಲರ ನಗು ನಿಂತು ಹೋಯಿತು. ಸ್ವಲ್ಪ ಹೊತ್ತು ಎಲ್ಲರೂ ಮೌನರಾದರು.
ಹರ್ಷ ಬೇರೆನೋ ವಿಷಯ ತೆಗೆದ "ಅಪ್ಪಾ, ಒಂದು ವಾರ ಇವನಿಗೆ ಪರೀಕ್ಷೆ ಅಂತ, ತಿಂಡಿ ತಿನ್ನದೇ ಎಲ್ಲಿ ಹೋಗಿಬಿಡ್ತಾನೋ ಅಂತ ಅಮ್ಮ ಎಲ್ಲಾ ಇವನಿಗೆ ಇಷ್ಟ ಇರೋ ತಿಂಡಿ ಮಾತ್ರ ಮಾಡುತ್ತಿದ್ದರು. ನಾಳೆಯಿಂದ ಮತ್ತೆ ಉಪ್ಪಿಟ್ಟು ಅನಿಸುತ್ತೆ."
ಅಮ್ಮ ಸ್ವಲ್ಪ ಸಿಟ್ಟಿಗೆದ್ದಿದ್ದರೂ ಎಲ್ಲರ ಜೊತೆ ನಕ್ಕು ಬಿಟ್ಟರು. ಆನಂದ ತಲೆ ಚಚ್ಚಿಕೊಂಡ ಉಪ್ಪಿಟ್ಟು ನೆನಿಸಿಕೊಂಡು.
ಅಮ್ಮ "ಉದ್ದಿನ ದೋಸೆ ನಿನಗೆ ಆಗೋಲ್ಲ. ನೀರು ದೋಸೆ ಅವನಿಗೆ ಆಗೋಲ್ಲ. ಚಟ್ನಿ ಇಲ್ಲಾಂದ್ರೆ ನಿಮ್ಮಪ್ಪನಿಗೆ ಆಗೋಲ್ಲ. ನನಿಗೇನು ಇಷ್ಟ ಅಂತ ಕೇಳಿದ್ದೀರಾ? ನಿಮ್ಗಿಂತ ಆ ನಾಯಿನೇ ಮೇಲು. ಏನು ಕೊಟ್ರೂ ಸ್ವಲ್ಪವೂ ಹಟ ಮಾಡದೆ ತಿನ್ನುತ್ತೆ. ನೋಡಿ ಕಲೀರಿ" ಅಂತ ನನ್ನ ಕಡೆ ಬೆರಳು ತೋರಿಸಿ ಹೇಳಿದರು. ನಾನು ಕುಷಿಯಲ್ಲಿ ಬಾಲ ಅಲ್ಲಾಡಿಸಿದೆ.
ಆನಂದ ಓಡುತ್ತಾ "ಹೌದಾ ಚಿಕ್ಕು" ಅಂತ ನನ್ನ ಮುದ್ದು ಮಾಡಿದ. ಎಷ್ಟೇ ಜಗಳ, ವಾದಗಳಿರಲಿ ಈ ಮನೆಯಲ್ಲಿ ಆದರೆ ಕೊನೆಗೆ ಎಲ್ಲವೂ ಆನಂದಮಯ.
=================== ಶುಭಂ =========================
Comments
Post a Comment