ಸಂಚಿಕೆ ೧: ಕರೆಂಟ್ ಬಂತು !!

ದೃಶ್ಯ ೧:

[ ನಾಣಿ ಭಟ್ರು ನೆಲದ ಮೇಲೆ ತನ್ನ ಮಗನ ಕಾಲಿನ ನಡುವೆ ಸೋಫಾಗೆ ಒರಗಿ ಕುಳಿತು ದಿನಪತ್ರಿಕೆ ಓದುತ್ತಿದ್ದಾರೆ. ಅವರ ಹಿರಿ ಮಗ ಹರ್ಷ ಸೋಫಾದ ಮೇಲೆ ಕುಳಿತು ತಂದೆಯ ತಲೆಗೆ ಎಣ್ಣೆ ಹಚ್ಚುತ್ತಾ ತಲೆ ಮಸಾಜ್ ಮಾಡುತ್ತಿದ್ದಾನೆ. ಪಕ್ಕದಲ್ಲೇ ಇನ್ನೊಂದು ಕುರ್ಚಿಯಲ್ಲಿ ಕಿರಿಯ ಮಗ ಆನಂದ ಕುಳಿತಿದ್ದಾನೆ. ಒಂದು ಕೈಯ್ಯಲ್ಲಿ ಟಿವಿ ರಿಮೋಟ್, ಇನ್ನೊಂದು ಕೈಯ್ಯಲ್ಲಿ ಟೂತ್ ಬ್ರಶ್. ಟಿವಿ ಆನ್ ಆಗುತ್ತಿಲ್ಲ, ಹಾಗಾಗಿ ರಿಮೋಟ್ ಹಿಂದುಗಡೆ ಬ್ರಶ್ ಹಿಡಿದುಕೊಂಡಿರುವ ಕೈಯ್ಯಿಂದ ಹೊಡೀತಾ ಇದ್ದಾನೆ. ಅಡುಗೆ ಕೋಣೆಯಲ್ಲಿ ಭಟ್ರ ಹೆಂಡತಿ ದೋಸೆ ಕಾವಲಿಗೆ ಎಣ್ಣೆ ಹಚ್ಚುತ್ತಿದ್ದಾಳೆ.]

ನಾಣಿ ಭಟ್ರು ಓದುತ್ತಾ, "ಅರೇ ! ಸಂಗೀತಳಿಗೆ ಹೆಣ್ಣು ಮಗು ಅಂತೆ. ಮೊನ್ನೆ ತಾನೆ ಆ ಕ್ರಿಕೆಟರ್ ಜೊತೆ ಮದುವೆಯಾಗಿದ್ದು." 

ಹರ್ಷ "ಹೌದು ! ಮದುವೆಯಾಗಿ ಕರೆಕ್ಟ್ ಒಂಬತ್ತು ತಿಂಗಳಾಯಿತು." ಭಟ್ರು ಒಮ್ಮೆ ಹಿಂತಿರುಗಿ ನೋಡಿ ಹಿಃ ಹಿಃ ಎಂದು ಹಲ್ಲು ಬಿಡುತ್ತಾ ನಕ್ಕರು. ಹರ್ಷನೂ ಅಪ್ಪನಂತೆಯೇ ಹಿಃ ಹಿಃ ಎಂದು ತಲೆಯಲ್ಲಾಡಿಸುತ್ತ ನಕ್ಕನು. ಇಬ್ಬರೂ ಆನಂದನ ಮುಖ ನೋಡುತ್ತಿದ್ದಂತೆ, ಅವನು ನಗುತ್ತಿದ್ದವನು ಒಮ್ಮೆಲೇ ಗಂಭೀರನಾದಂತೆ ನಟಿಸಲು ಯತ್ನಿಸಿದನು. ಆನಂದನಿಗೆ ಎಲ್ಲವೂ ಅರಿವಾಗಿದ್ದರೂ ತೋರಿಸಿಕೊಳ್ಳಲು ಸ್ವಲ್ಪ ಮುಜುಗರ, ಯಾಕೆಂದರೆ ಅವನಿಗಿನ್ನೂ ೧೮ ವಯಸ್ಸಾಗಿರಲಿಲ್ಲ. ಎಲ್ಲಿ ತನ್ನ ಕಾಳೆಲಿತಾರೋ ಅಂತ ಹೆದರಿ ಒಳಗೊಳಗೆ ನಗುತ್ತಾ ಆ ಕಡೆ ಈ ಕಡೆ ನೋಡಲಾರಂಭಿಸಿದನು. ಭಟ್ರು ಮತ್ತು ಹರ್ಷ ಇದನ್ನು ಕಂಡು ಇನ್ನೂ ಕಿಸಕ್ಕೆಂದು ನಗಲಾರಂಭಿಸಿದರು.

ಅಷ್ಟರಲ್ಲಿ, ಅಡುಗೆ ಕೋಣೆಯಿಂದ ಸುಶೀಲ ಕೈಯ್ಯಲ್ಲಿ ಸೌಟು ಹಿಡಿದು ಹೊರ ಬಂದು " ಇದೇ ಓದಿ ನೀವು. ಯಾವ ಹಿರೋಯಿನಿಗೆ ಮದುವೆಯಾಯಿತು, ಯಾವ ಹಿರೋಯಿನಿಗೆ ಮಕ್ಕಳಾಯಿತು, ಯಾವ ಹಿರೋಯಿನಿಗೆ ಡೈರಸಾಯಿತು ಅಂತ."

ಆನಂದ "ಡೈರಸ್ ಅಲ್ಲ ಡ್ರೈವರ್ಸ್" ಅಮ್ಮನನ್ನು ತಾನೇ ತಪ್ಪಾಗಿ ತಿದ್ದುತ್ತಾ.

ಹರ್ಷ "ಡ್ರೈವರ್ಸ್ ಅಲ್ಲ ಡೈವರ್ಸ್ !!" ಇಬ್ಬರನ್ನೂ ಸರಿಯಾಗಿ ತಿದ್ದುತ್ತಾ.

ಆನಂದ ಮತ್ತು ಸುಶೀಲ ಒಂದೇ ರಾಗದಲ್ಲಿ "ಅದೇ!"

ಭಟ್ರು ನಗುತ್ತ "ಸುಮ್ಮನೆ ಜನರಲ್ ನಾಲೆಜಿಗೆ! "

ಸುಶೀಲಾ ಗಂಡನ ತಮಾಷೆಗೆ ಬೆಲೆ ಕೊಡದೆ ಮುಂದುವರಿಸಿದಳು "ಊರ್ ವಿಷಯ ಓದಿ. ಇವತ್ತು ದಿನವಿಡೀ ಕರೆಂಟಿರೋಲ್ಲಾ ನಮ್ಮ ಏರಿಯಾದಲ್ಲಿ. ಕಾರ್ಖಾನೆಗೆ ರಜೆ ಕೊಡಬೇಕೋ ಇಲ್ವಾ ಅಂತ ನೋಡಿ." 

ಭಟ್ರು ಗಂಭೀರರಾದರು. ಕೂಡಲೇ ಸ್ತಳೀಯ ಸುದ್ದಿಗಳ ಪುಟಕ್ಕೆ ತಿರುಗಿಸಿದರು. ಸುಶೀಲಾ ಹೇಳಿದ್ದು ನಿಜವಾಗಿತ್ತು.

ಸುಶೀಲಾ "ಹೋದ ಸಾರಿ ಹೀಗೆ ಕರೆಂಟ್ ಇರಲ್ಲಾ ಅಂತ ಕೆಲಸದವರಿಗೆಲ್ಲಾ ರಜೆ ಕೊಟ್ರಿ. ಆದರೆ ಆ ದಿನಪೂರ್ತಿ ಕರೆಂಟ್ ಹೋಗಲೇ ಇಲ್ಲ. ಈ ಸತಿಯಾದ್ರು ಸರಿಯಾಗಿ ವಿಚಾರಿಸಿಕೊಳಿ. ಇಲ್ಲಾಂದ್ರೆ ಆ ಪಾಪಮ್ಮ ಹೋದ ಸಲದ ಹಾಗೆ ಒಂದು ದಿನದ ಸಂಬಳ ನಷ್ಟ ಆಯಿತು ಅಂತ ಗಲಾಟೆ ಮಾಡುತ್ತಾಳೆ"

ಪಾಪಮ್ಮನ ಹೆಸರು ಕೇಳುತ್ತಿದ್ದಂತೆ ಭಟ್ರು ಚುರುಕಾದರು. ಪಾಪಮ್ಮ ಅವರ ಗೋಡಂಬಿ ಫಾಕ್ಟರಿಯಲ್ಲೇ ವ್ಯವಸ್ಥಾಪಕಿ. ಹೆಸರಿಗಷ್ಟೇ ಪಾಪ! ಬಹಳ ಜೋರು ಆ ಹೆಂಗಸು ಆದರೆ ಪ್ರಾಮಾಣಿಕಳು ಕೂಡ. ಭಟ್ರ ಅಪ್ಪನ ಕಾಲದಿಂದಲೂ ಅವಳೇ ಕಾರ್ಖಾನೆನ ನೋಡ್ಕೊಂಡಿದ್ದು. ಭಟ್ರು ಅವಳನ್ನು ಸುಮ್ಮನೆ ಎದುರು ಹಾಕ್ಕೋಳೋದಿಲ್ಲ.

ಹರ್ಷ "ಪಾಪಮ್ಮ ಕಾಲಿಗೆ ಬ್ಯಾಂಡೇಜ್ ಬಿದ್ದಿದೆ. ಅವಳು ಬರೋದು ಇನ್ನು ಮುಂದಿನ ವಾರವೇ !"

ಭಟ್ರು ಆಶ್ಚರ್ಯವಾಗಿ ತನ್ನ ಕಡೆಗೆ ನೋಡಿದ್ದನ್ನು ಕಂಡು, ಹರ್ಷ ಎರಡೂ ಕಾಲುಗಳನ್ನು ಮೇಲೇರಿಸಿ, ಮಡಚಿ ಕೂತು, ತನ್ನ ಎರಡೂ ಕೈಗಳಿಂದ ತೊಡೆಗಳ ಮೇಲೆ ತಟ್ಟುತ್ತಾ ನಗುತ್ತಾ ವಿವರಿಸತೊಡಗಿದನು "ಶೆ! ನಿಮಗೆ ವಿಷಯ ಗೊತ್ತಿಲ್ವಾ? ಈ ಗಜಾನನ ಬಸ್ಸಿನವರು ಹೊಸ ಕಂಡಕ್ಟರ್ ಕೆಲಸಕ್ಕೆ ಇಟ್ಕೊಂಡ್ರಲ್ಲ ಹೋದ ವಾರ. ನಿನ್ನೆ ಎಂತಾಯಿತು, ಆ ಬಸ್ಸಲ್ಲಿ ಪಾಪಮ್ಮ ಹತ್ತಿದ್ರಂತೆ. ಆ ಕಂಡಕ್ಟರಿಗೆ ಪಾಪಮ್ಮ ವಿಷಯ ಎಲ್ಲ್ ಗೊತ್ತಿದೆ. ಪಾಪಮ್ಮ ಹರೀಶನ ಅಂಗಡಿ ಸ್ಟಾಪ್ ದಾಟಿದ ಮೇಲೆ ಎದ್ದು ನಿಂತು ಅವಳ ಮನೆ ಮುಂದೆ ಸ್ಟಾಪ್ ಕೊಡೆಂದು ಬಾಗಿಲ ಹತ್ರ ನಡೆದಳಂತೆ. ಆ ಕಂಡಕ್ಟರ್ ಇದು ಎಕ್ಸಪ್ರೆಸ್ ಬಸ್ಸು ಅಲ್ಲೆಲ್ಲಾ ನಿಲ್ಲೂದಿಲ್ಲ ಅಂದನಂತೆ. ಪಾಪಮ್ಮನಿಗೆ ಬಂದ ಸಿಟ್ಟಲ್ಲಿ, ಅದ್ ಹೇಗೆ ಸ್ಟಾಪ್ ಕೊಡುವುದಿಲ್ಲ ನಾನೂ ನೋಡುತ್ತೇನೆ ಅಂತ ದಬಾಯಿಸುತ್ತ ಆ ಕಂಡಕ್ಟರನ ದೂಡಿ ಬಸ್ಸಿಂದ ಇಳಿಲಿಕ್ಕೆ ಹೊರಟಳಂತೆ. ದೂಡಿದ ಪೆಟ್ಟಿಗೆ, ಆ ಕಂಡಕ್ಟರ್ ಇಬ್ರು ಹೆಂಗಸ್ಸಿನ ಮೇಲೆ ಹೋಗಿ ಬಿದ್ದನಂತೆ. ಆ ಕಡೆ ಆ ಇಬ್ರು ಹೆಂಗಸರು ಕಂಡಕ್ಟರನ ಜಾಡಿಸುತ್ತಿದ್ದರೆ, ಈ ಕಡೆ ಪಾಪಮ್ಮ ಕೊನೆ ಮೆಟ್ಟಿಲಿಗೆ ಬಂದು ನಿಂತಿದ್ದಳಂತೆ ಇಳಿಯುವುದಕ್ಕೆ. ಆ ಸಮಯದಲ್ಲಿ ಬಸ್ ಡ್ರೈವರ್ ಅವಳನ್ನು ನೋಡಿ ಗಾಬರಿಗೊಂಡು, ಎಲ್ಲಿ ಪಾಪಮ್ಮ ಬಸ್ಸಿಂದ ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಾಳೋ ಅಂತ ಭಯದಿಂದ ರಪಕ್ಕನೆ ಬ್ರೇಕ್ ಹಾಕಿದ್ನಂತೆ. ಆ ನಮೂನೆ ಬ್ರೇಕ್ ಹಾಕಿದ ಪೆಟ್ಟಿಗೆ, ಪಾಪಮ್ಮ ಸಮತೋಲನ ಕಳ್ಕಂಡು ಒಂದು ಕೈ ಮತ್ತೆ ಒಂದು ಕಾಲು ಹೊರಗೆ ನೇತಾಡುತ್ತ ಬಸ್ ಕಂಬಿ ಹಿಡಿದು ಆ ಕಡೆಯಿಂದ ಈ ಕಡೆಗೆ ಓಲಾಡುತ್ತಿದ್ದಳಂತೆ. ಅಷ್ಟಾದರೂ ಅವಳು ಏನೂ ಲೆಕ್ಕಿಸದೆ ಕಂಡಕ್ಟರಿನ ಜೊತೆಗೆ ಡ್ರೈವರಿಗೂ ಶಾಪ ಹಾಕುತ್ತ ಬೈತಿದ್ದಳಂತೆ. ಬಸ್ಸು ಸ್ವಲ್ಪ ನಿಧಾನವಾಗುವಷ್ಟರಲ್ಲಿ, ಪಾಪಮ್ಮ ಇಳಿಯುವುದಕ್ಕೆ ಕೆಳಗೆ ಕಾಲಿಟ್ಟೆ ಬಿಟ್ಟಳಂತೆ. ಅವಳ ಗ್ರಹಚಾರಕ್ಕೆ, ಸರಿಯಾಗಿ ನಿನ್ನೆ ಮಳೆಯಿಂದ ಕೊಚ್ಚೆಯಾಗಿದ್ದ ಕೆಸರಲ್ಲಿ ಕಾಲಿಟ್ಟಳಂತೆ. ಕಾಲು ಜಾರಿ ಸೊಂಟದ ಮೇಲೆ ಬಿದ್ದು ಇನ್ನೊಂದು ಕಾಲು ಬಸ್ಸಿನ ಚಕ್ರದಡಿಗೆ ಜಜ್ಜಿ ಹೋಗೋದ್ರಲ್ಲಿ ಸ್ವಲ್ಪದ್ರಲ್ಲಿ ಬಚಾವಾದಳಂತೆ. ಸೊಂಟ ಗಟ್ಟಿ ಇದ್ದಿದ್ರಿಂದ ಉಳುಕೊಂಡಿದೆ, ಆದರೆ ಕಾಲು ಫ್ರಾಕ್ಚರ್ ಆಗಿ ಬ್ಯಾಂಡೆಜ್ ಹಾಕಿದ್ದಾರೆ."

ಪಾಪಮ್ಮನ ಕತೆ ಕೇಳಿ ಭಟ್ರು ಮತ್ತು ಆನಂದ ನಕ್ಕೂ ನಕ್ಕು ಸುಸ್ತಾದರು. ಸುಶೀಲಾ ಅವರೊಟ್ಟಿಗೆ ಸ್ವಲ್ಪ ಹೊತ್ತು ನಕ್ಕಳಾದಳೂ, ಕೊನೆಗೆ ಅಂದಳು "ಛೆ !! ಪಾಪ. ಸಾಕು ನಿಲ್ಲಿಸಿ ನಿಮ್ಮ ನಗು." 

 ಸುಶೀಲಾ ಆನಂದನ ಕೈಯ್ಯಲ್ಲಿ ಇನ್ನು ಟೂತ್ ಬ್ರಶ್ ನೋಡಿ "ನೀನಿನ್ನು ಬ್ರಶ್ ಮಾಡಿಲ್ವಾ? ಸ್ನಾನ ಯಾವಾಗ ಮಾಡ್ತೀಯಾ? ಹೊರಡು ಬೇಗ" ಅಂತ ದಬಾಯಿಸಿದಳು.

ಆನಂದ "ಅಣ್ಣನೂ ಸ್ನಾನ ಮಾಡಿಲ್ಲ. ಅವನಿಗೇನು ಹೇಳೋದಿಲ್ಲ ನೀನು."

ಹರ್ಷ "ಕಾಲೇಜು ಇರೋದು ನನಿಗೋ ನಿನಗೋ?" 

ಆನಂದ ನಗುತ್ತ "ರವಿವಾರ ಎಂತ ಕಾಲೇಜು. ನೆಪ ನಿಂಗೆ"

ಹರ್ಷ "ಜಾಸ್ತಿ ಮಾತಾಡಬೇಡ. ಹೇಳಿದ್ದು ಕೆಲಸ ಮಾಡು."

ಇನ್ನೇನು ಆನಂದ ಪ್ರತ್ಯುತ್ತರ ನೀಡಬೇಕೆನ್ನುವಷ್ಟರಲ್ಲಿ, ಭಟ್ರು ಮಧ್ಯ ಮಾತಾಡಿದರು "ಬೆಳ್ ಬೆಳಿಗ್ಗೆ ಎಂತ ಜಗಳ ನಿಮ್ಮದು. ಹರ್ಷ ಹೋಗು ಆ ಕೆಇಬಿಗೆ ಫೋನ್ ಮಾಡಿ ಕೇಳು ಕರೆಂಟು ಇರುತ್ತೋ ಇಲ್ವೊ ಅಂತ." 

ಹಾಗೆಯೇ ಆನಂದನ ಕಡೆಗೆ ತಿರುಗಿ "ಮತ್ತೆ ನೀನು, ಆವಾಗಿಂದ ಆ ರಿಮೋಟ್ ಬಾರಿಸ್ತಾ ಇದ್ದೀಯಲ್ಲಾ. ಆ ಬ್ರಶ್ ಮೇಲಿರೋ ಪೇಸ್ಟೆಲ್ಲ ನನ್ನ ಮುಖದ ಮೇಲೆ ಹಾರುತ್ತ ಇದೆ. ಟಿವಿ ಪ್ಲಗ್ ಹಾಕಿಲ್ಲ ಅಂದ್ ಮೇಲೆ ಹೇಗೆ ಆನ್ ಆಗ್ತದೆ? ಅದು ಏನು ಕಲೀತಾನೋ ಶಾಲೆಯಲ್ಲಿ, ಪಾಸಾಗ್ತೀಯ ಈ ಸಲ? ನಿನ್ನಂತ ಮೂರ್ಖರನ್ನು ನೋಡೇ ಆ ಟಿವಿಗೆ ಮೂರ್ಖರ ಪೆಟ್ಟಿಗೆ ಅಂತ ಹೆಸರಿಟ್ಟಿರೋದು ಅನಿಸುತ್ತೆ."

ಆನಂದ ಹಲ್ಲು ಕಿಸಿಯುತ್ತ ಬಚ್ಚಲು ಮನೆಯತ್ತ ನಡೆದ. ಹರ್ಷ ಮೊಬೈಲ್ ಹಿಡಿದು ಹೊರ ನಡೆದ. ಸುಶೀಲಾ ವಾಪಸು ಅಡುಗೆ ಕೋಣೆಗೆ ನಡೆದಳು.

ದೃಶ್ಯ ೨:

ಭಟ್ರು ಪರಿವಾರ ಸಮೇತ ಮಧ್ಯಾಹ್ನದ ಊಟ ಮುಗಿಸಿ ವರಾಂಡದಲ್ಲಿ ಕುಳಿತು ಹರಟೆ ಹೊಡಿಯುತ್ತಿದ್ದರು. ಹರ್ಷ ಕೆಇಬಿಗೆ ಫೋನ್ ಮಾಡಿ ಕರೆಂಟು ಹೋಗುವುದಿಲ್ಲ ಅಂತ ಧೃಡೀಕರಿಸಿದ್ದ. ಹಾಗಾಗಿ ಕಾರ್ಖಾನೆ ಕೆಲಸ ನಡೆಸಲು ಭಟ್ರು ರಾಜಣ್ಣನಿಗೆ ಹೇಳಿ ಕಳಿಸಿದ್ದರು. ಎಂದಿನಂತೆ ಒಂದು ಸಣ್ಣ ನಿದ್ದೆ ಮಾಡಿ ಸಂಜೆ ಕಾರ್ಖಾನೆ ಕಡೆಗೆ ಹೋಗುವುದೆಂದು ಭಟ್ರು ಆರಾಮಾಗಿ ಮನೆಯಲ್ಲಿ ಪರಿವಾರದೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ ಅವರಿಗೇನು ಗೊತ್ತು ಅವರ ಸಾಮಾನ್ಯ ದಿನ ಸ್ವಲ್ಪ ಸಮಯದಲ್ಲೇ ತಲೆಕೆಳಗಾಗುವುದೆಂದು. 

ಸ್ವಲ್ಪ ಹೊತ್ತಲ್ಲಿ ರಾಜಣ್ಣನೇ ಮನೆ ಕಡೆಗೆ ಒಡೋಡಿ ಬರುತ್ತ ಇರೋದನ್ನು ಕಂಡು ಭಟ್ರು ಎದ್ದು ನಿಂತರು. ದೂರದಿಂದಲೇ ನಗುತ್ತಾ ಕೂಗಿದರು "ಏನು ರಾಜಣ್ಣ. ಹಾಗೆ ಒಡೋಡಿ ಬರುತ್ತಾ ಇದ್ದೀರಾ? ಶೆಟ್ರ ನಾಯಿ ಓಡಿಸ್ಕೊಂಡು ಬಂತಾ?"

ರಾಜಣ್ಣ ಏದುಸಿರು ಬಿಡುತ್ತಾ "ಧನಿಗಳೇ ಒಳ್ಳೆ ತಮಾಷೆ ನಿಮಗೆ. ನಿಮ್ಮ ಫೋನ್ ಎಲ್ಲಿದೆ. ಎಷ್ಟು ಕಾಲ್ ಮಾಡಿದ್ರೂ ಸ್ವಿಚ್ ಆಫ್ ಅಂತ ಬರ್ತಾ ಇದೆ"

ಭಟ್ರು ಹರ್ಷ ಕಡೆಗೆ ನೋಡಿದರು. ಸನ್ನೆಯನ್ನರಿತ ಹರ್ಷ ಕೂಡಲೆ ಮನೆಯೊಳಗೆ ಓಡಿ ಹೋಗಿ ಮೊಬೈಲ್ ತೆಗೆದುಕೊಂಡು ಅಪ್ಪನ ಕೈಗೆ ಕೊಟ್ಟ. ಭಟ್ರು ಮೊಬೈಲ್ ಸ್ವಿಚ್ ಆಫ್ ಅಗಿರುವುದನ್ನು ಕಂಡು ಆನಂದನ ಕಡೆಗೆ ನೋಡಿದರು "ನಿನಗೆ ಚಾರ್ಜಿಗೆ ಇಡು ಅಂತ ಆವಾಗ್ಲೆ ಕೊಟ್ಟಿದ್ನಲ್ಲ. ಯಾಕೆ ಆಫ್ ತೋರಿಸ್ತಾ ಇದೆ."

ಹರ್ಷ ಮಧ್ಯೆ ಉತ್ತರಿಸಿದನು "ಯಾಕೇಂದ್ರೆ ಈ ಮಂಗ ಚಾರ್ಜರ್ ಸಿಕ್ಕಿಸಿದಾನೆ ಆದರೆ ಸ್ವಿಚ್ ಆನ್ ಮಾಡಲೇ ಇಲ್ಲ."

ಆನಂದ "ಇಲ್ಲಾ ! ನಾನು ಇಟ್ಟಾಗ ಸ್ವಿಚ್ ಆನ್ ಇತ್ತು."

ರಾಜಣ್ಣ ಇವರ ಗೊಂದಲದ ನಡುವೆ ಸುಧಾರಿಸಿಕೊಂಡನು. ಉಸಿರು ಮತ್ತೆ ಹಿಡಿತಕ್ಕೆ ಬಂತು. ಇನ್ನೊಂದು ಗಲಾಟೆ ಆಗುವ ಮೊದಲೇ ಅವನು ನುಡಿದನು "ಮೊಬೈಲ್ ವಿಷಯ ಬಿಡಿ. ಅಲ್ಲಿ ಪಾಪಮ್ಮ ನಮ್ಮ ಗಿರಿ ಭಟ್ರಿನ ಬೆವರಿಳಿಸ್ತಾ ಇದ್ದಾಳೆ. ನೀವು ಈಗ ಬರ್ಲಿಲ್ಲ ಅಂದ್ರೆ ದೊಡ್ಡ ರಾದ್ಧಾಂತಾನೆ ಆಗೋದಿದೆ."

ಭಟ್ರು ಪಾಪಮ್ಮನ ಹೆಸರು ಮತ್ತೊಮ್ಮೆ ಕೇಳಿ ಗಾಬರಿಯಾದರು. "ಸರಿ ಬಾ" ಅಂತ ಪಂಚೆ ಸೊಂಟಕ್ಕೆ ಸಿಕ್ಕಿಸಿ ಹೆಜ್ಜೆ ಹಾಕಿದರು. ಹರ್ಷನೂ ಅವರ ಜೊತೆಗೆ ನಡೆದ. ಆನಂದನೂ ಅವರ ಹಿಂದೆನೇ ಓಡುತ್ತ ನಡೆದ. ಹಿಂದೆಯಿಂದ ಸುಶೀಲಾ ಕೂಗುತ್ತ ಇದ್ದಳು "ಏ ಆನಂದ ! ನಿಂಗೇನೋ ಕೆಲ್ಸ ಅಲ್ಲಿ." ಆನಂದ ಲೆಕ್ಕಿಸಲಿಲ್ಲ. 

ಮನೆಯಿಂದ ಕಾರ್ಖಾನೆ ೧೫ ನಿಮಿಷ ಕಾಲುದಾರಿ. ರಾಜಣ್ಣ ದಾರಿಯುದ್ದಕ್ಕೂ ನಡೆದ ಘಟನೆ ವಿವರಿಸತೊಡಗಿದ.

"ಬೆಳೆಗ್ಗೆ ಹತ್ತು ಘಂಟೆಗೆ ಕಾರ್ಖಾನೆಯಲ್ಲಿ ಕರೆಂಟು ಹೋಗಿದ್ದು ಇನ್ನೂ ಬರಲಿಲ್ಲ. ನೀವು ಕರೆಂಟು ಇರುತ್ತೆ ಅಂತ ಹೇಳಿ ಕಳಿಸಿದ್ದರಲ್ಲ ಅದಕ್ಕೆ ನಾನೂ ಸ್ವಲ್ಪ ಹೊತ್ತಷ್ಟೇ ತೆಗೆದಿರಬಹುದು ಅಂದುಕೊಂಡಿದ್ದೆ."

ಭಟ್ರು ಅವನನ್ನು ಮಧ್ಯೆ ಮಾತಲ್ಲಿ ತಡೆದರು "ಅಯ್ಯೋ ನಮ್ಮನೇಲಿ ಕರೆಂಟು ಇತ್ತಲ್ಲ ಬೆಳಗ್ಗಿಂದ. ಎರಡೂ ಒಂದೇ ಲೈನ್ ಅಲ್ವಾ. ಮತ್ತೆ ಫಾಕ್ಟರಿಲಿ ಯಾಕೆ ಕರೆಂಟ್ ಇರಲಿಲ್ಲ. ಈ ಕೆಇಬಿ ಅವರನ್ನ ನಂಬ್ಕೊಂಡ್ರೆ ಅಷ್ಟೇ ಗತಿ. ಸರಿ ಪಾಪಮ್ಮನಿಗೆ ಹೇಗೆ ಗೊತ್ತಾಯಿತು, ಅವಳು ರಜೆ ತಕ್ಕೊಂಡಿರಲಿಲ್ವಾ ಇವತ್ತು?"

"ಅಯ್ಯೋ ! ಪಾಪಮ್ಮನಿಗೆ ಗೊತ್ತಿಲ್ದೇ ಇರುವ ವಿಷಯ ಇದೆಯಾ. ಅವಳ ಮನೇಲೂ ಕರೆಂಟು ಇಲ್ಲ ಅಂತ ಫಾಕ್ಟರಿಲಿ ಇದ್ಯಾ ಇಲ್ವಾ ಅಂತ ನೋಡ್ಲಿಕ್ಕೆ ಬಂದಿದ್ದಾಳೆ. ಫಾಕ್ಟರಿ ಹಿಂದುಗಡೆನೆ ತಾನೆ ಅವಳ ಮನೆ."

ಹರ್ಷ ಕುತೂಹಲದಿಂದ "ಅದು ಸರಿ. ಗಿರಿ ಭಟ್ರ ಮೇಲೆ ಯಾಕೆ ರೇಗಾಡುತ್ತ ಇದ್ದಾಳಂತೆ?"

"ಯಾವತ್ತಿನಂತೆ ಕೆಲಸದವರು ೮ ಘಂಟೆಗೆ ಬಂದಿದ್ರು. ಗಿರಿ ಭಟ್ರು ಇವತ್ತು ರಜಾ ಅಂದ್ಕೊಂಡು ಬಂದಿರಲಿಲ್ಲ. ನಾನು ಫೋನ್ ಮಾಡಿದಾಗ್ಲೇ ಅವರಿಗೆ ಫಾಕ್ಟರಿ ರಜಾ ಇಲ್ಲ ಅಂತ ಗೊತ್ತಾಗಿದ್ದು. ಪಾಪ ಓಡೋಡಿ ಬಂದು ಕೆಲಸ ಶುರು ಹಚ್ಚಿಕೊಂಡರು. ೮೦ ಜನರಿಗೆ ತಿಂಡಿ, ಊಟ ತಯಾರು ಮಾಡೋದು ತಮಾಷೆನ. ಪಾಪಮ್ಮ ಗಿರಿ ಭಟ್ರು ಬಂದೊಡನೆ ಅವರನ್ನ ತರಾಟೆಗೆ ತಗೊಂಡ್ಲು. ಗಿರಿ ಭಟ್ರೋ ಮೊದ್ಲೇ ಪಾಪದವರು. ಪಾಪಮ್ಮನ ಒತ್ತಡಕ್ಕೆ ಅವರ ಕೆಲ್ಸ ಇನ್ನೂ ನಿಧಾನವಾಯ್ತು. ಅವರ ಮತ್ತು ನಮ್ಮೆಲ್ಲರ ಗ್ರಹಚಾರಕ್ಕೆ, ಸರಿಯಾಗಿ ಹತ್ತು ಘಂಟೆಗೆ ಕರೆಂಟು ಹೋಯಿತು. ಭಟ್ರು ಇನ್ನೇನು ಚಟ್ನಿ ಮಾಡೋದು ಉಳಿದಿತ್ತು ಇಡ್ಲಿ, ವಡಾ ಮತ್ತು ಚಾಕಾಫಿ ಎಲ್ಲಾ ರೆಡಿ ಇತ್ತು. ನಾನೂ ಕೂಡ ಸ್ವಲ್ಪ ಹೊತ್ತಲ್ಲಿ ಬರಬಹುದು ಅಂದುಕೊಂಡು ಅವರನ್ನು ಸಮಾಧಾನ ಮಾಡಿದೆ. ಆದರೆ ಅವರು ಕಾಯದೆ, ಚಟ್ನಿ ಇಲ್ಲಾಂದ್ರೆ ಸಾಂಬಾರಾದ್ರು ಮಾಡಿಕೊಡೋಣ ಅಂತ ಶುರು ಹಚ್ಕೊಂಡ್ರು. ಈ ಪಾಪಮ್ಮ ಸುಮ್ನಿರಬೇಕೊ ಬೇಡ್ವೋ. ೧೦ ಘಂಟೆಯಾದ್ರೂ ತಿಂಡಿ ರೆಡಿ ಇಲ್ಲ. ಕೆಲಸದವರೆಲ್ಲ ಹಸಿದುಕೊಂಡಿದ್ದಾರೆ. ಇನ್ನು ಸಾಂಬಾರ್ ರೆಡಿ ಅಗೋದು ಯಾವಾಗ? ಅಷ್ಟರಲ್ಲಿ ಊಟದ ಟೈಮ್ ಆಗ್ಬಿಡ್ತದೆ. ಇಲ್ಲಿ ಯಾರಿಗೂ ಜವಾಬ್ದಾರಿನೇ ಇಲ್ಲ ಅಂತ ಕೊಂಕು ಮಾತಾಡ್ತ ಇದ್ಲು. ಪಾಪ ಭಟ್ರು ಅವರಿಂದಲೇ ಎಲ್ಲಾ ಲೇಟಾಯ್ತು ಅಂತ ಬೇಜಾರು ಮಾಡುತ್ತ ಕೆಲಸ ಮಾಡುತ್ತಿದ್ದರು. ನಾನೂ ಎಷ್ಟು ಅಂತ ಸಮಾಧಾನ ಮಾಡ್ಲಿ. ಆವಾಗ್ಲೆ ನಿಮ್ಗೆ ಫೋನ್ ಮಾಡಿದ್ದು, ನೀವು ನೋಡಿದ್ರೆ ಸ್ವಿಚ್ ಆಫ್ ಮಾಡಿ ಕೂತೀದ್ದೀರಾ." ಅಂತ ರಾಜಣ್ಣ ಸ್ವಲ್ಪ ಖಾರವಾಗಿಯೇ ನುಡಿದನು. ಭಟ್ರು ಆನಂದನ ಕಡೆಗೆ ಸಿಟ್ಟಿನಿಂದ ನೋಡಿದರು. ಆನಂದ ಉಗುಳು ನುಂಗುತ್ತ ತಲೆ ಕೆರೆದುಕೊಂಡನು.

ರಾಜಣ್ಣ ಮುಂದುವರೆಸಿದನು "ಎಲ್ಲಾ ಇಲ್ಲಿಗೆ ಮುಗೀತು ಅಂದ್ಕೋಬೇಡಿ. ತಿಂಡಿ ಆದಾಗಿನಿಂದ ಪಾಪಮ್ಮ ಮತ್ತೆ ಗೋಳು ಶುರು ಹಚ್ಕೊಂಡ್ಲು. ಕರೆಂಟ್ ಯಾಕೆ ಬರಲಿಲ್ಲ ಅಂತ. ನನ್ಹತ್ರ ಬಂದು ನೀನು ಕರೆಂಟ್ ಬರುತ್ತೆ ಅಂತ ಹೇಳ್ದೇ ತಾನೆ, ಎಲ್ಲಿದೆ? ಸರಿಯಾಗಿ ವಿಚಾರಿಸಿದ್ದೀಯಾ ಇಲ್ವಾ? ಎಲ್ಲಿ ನಿಮ್ಮ ಯಜಮಾನ್ರು? ಫಾಕ್ಟರಿ ನಡೆಸಬೇಕೋ ಬೇಡ್ವಂತೆ ಅವನಿಗೆ? ಅಂತ ನಿಮ್ಮನ್ನೂ ಕೇಳ್ತಾ ಇದ್ದಳು. ಅಲ್ಲಾ ನೀವೇ ಹೇಳಿ, ಕರೆಂಟ್ ಇಲ್ಲಾಂದ್ರೆ ನಾನೇನು ಮಾಡೋಕಾಗುತ್ತೆ. ಕೆಇಬಿಲಿ ನನ್ನ ಮಾವ ಕೂತಿದಾನಾ ಕೇಳಿದ ತಕ್ಷಣ ಕೊಡೋಕ್ಕೆ. ಪಾಪಮ್ಮ ಕಾಟ ತಡೆಯಲಾರದೆ ನಿಮ್ಮತ್ರ ಬಂದೆ"

ದೃಶ್ಯ ೩:

ಅಷ್ಟರಲ್ಲಿ ಅವರು ಕಾರ್ಖಾನೆ ಮುಟ್ಟಿದ್ದರು. ಪಾಪಮ್ಮ ಗೇಟ್ ಹತ್ರವೇ ಕಾಯುತ್ತ ನಿಂತಿದ್ದಳು. "ಏ ನಾಣಿ!! ಎಲ್ಲೋ ಹೋಗಿದ್ದೆ ಇಷ್ಟೊತ್ತು?" ನಾಣಿ ಭಟ್ರು ಸಮಾಧಾನದಿಂದ ಎಲ್ಲಾ ವಿವರಿಸಿದರು. ಪಾಪಮ್ಮ ಹೊರಗಿಂದ ಎಷ್ಟೇ ಒರಟಾಗಿ ಕಂಡರೂ ಅವಳು ಒಳಗಿಂದ ಮೃದು ಸ್ವಭಾವದವಳು ಅಂತ ನಾಣಿ ಭಟ್ರಿಗೆ ಗೊತ್ತಿತ್ತು. ಈ ಕಾರ್ಖಾನೆ ಉಳಿದಿರುವುದೇ ಪಾಪಮ್ಮನ ನಿಷ್ಟೆಯಿಂದ ಅನ್ನುವುದನ್ನು ಅರಿತಿದ್ದ ನಾಣಿ ಭಟ್ರು ಪಾಪಮ್ಮನ ಕಟು ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಕೆಲವೊಮ್ಮೆ ಪಾಪಮ್ಮನ ಸ್ವಭಾವದಿಂದ ನಾಣಿ ಭಟ್ರು ಕೂಡ ಬೇಸತ್ತಿದ್ದರು. ಅವರು ನಿಧಾನವಾಗಿ ಕೇಳಿದರು " ಪಾಪಮ್ಮ, ನಮ್ಮ ಗಿರಿ ಭಟ್ರು ತುಂಬ ಮೃದು ಅಂತ ಗೊತ್ತಿಲ್ವಾ ನಿಂಗೆ. ಅವರಿಗ್ಯಾಕೆ ಬೈತೀಯಾ?"

ಪಾಪಮ್ಮ ಮುಗುಳ್ನಗುತ್ತ "ನಾನೇನು ಬೈದಿಲ್ಲ ಮರಾಯ ! ಊಟಕ್ಕೆ ಇನ್ನೆಷ್ಟು ಹೊತ್ತು ಅಂತ ಕೇಳಿದೆ ಅಷ್ಟೇ" 

ನಾಣಿ ಭಟ್ರು ಕೂಡಲೆ ಫಾಕ್ಟರಿ ಹಿಂದಿನ ಕ್ಯಾಂಟೀನತ್ತ ಹೊರಟರು. ಗಿರಿ ಭಟ್ರು ಆ ಕಡೆಯಿಂದ ಈ ಕಡೆ ನಡೆದಾಡುತ್ತಿದ್ದರು. ನಾಣಿ ಭಟ್ರನ್ನು ಕಂಡು "ಅಬ್ಬಾ !! ಈಗಲಾದ್ರೂ ಬಂದ್ರಲ್ಲ. ಆ ಪಾಪಮ್ಮ ಬೆಳಿಗ್ಗೆಯಿಂದ ತಲೆ ತಿಂತಿದ್ದಾಳೆ. ಈಗ ಊಟಕ್ಕೆ ಸಾಂಬಾರಿಗೆ ಮತ್ತು ಸುಕ್ಕ ಮಾಡಲಿಕ್ಕೆ ಮಸಾಲ ತಯಾರು ಮಾಡಬೇಕು ಆದರೆ ಕರೆಂಟ್ ಇಲ್ಲದೆ ಏನು ಮಾಡೋಕ್ಕಾಗಲ್ಲ. ಮೆನು ಪ್ರಕಾರ ಊಟ ರೆಡಿಯಾಗಿಲ್ಲಾಂದ್ರೆ ನನ್ನ ತಲೆ ಮೇಲೆ ಬಂದು ಕೂತು ಬಿಡ್ತಾಳೆ. ಕರೆಂಟ್ ಬರುತ್ತಾ ಇವತ್ತು?"

ನಾಣಿ ಭಟ್ರಿಗೂ ಈಗ ಅನುಮಾನ ಶುರುವಾಯ್ತು. ಕರೆಂಟ್ ಬರೋದಿದ್ದರೆ ಇಷ್ಟರೊಳಗೆ ಬಂದಿರಬೇಕಿತ್ತು. ತಮ್ಮ ಮನೆಯಿಂದಲೇ ಮಸಾಲ ರೆಡಿ ಮಾಡಿ ತರಬೇಕೇನೋ ಎಂದು ಅಲೋಚಿಸಿದರು.

ಆನಂದ ಹಿಂದಿನಿಂದ "ಅಪ್ಪಾ, ನಿಮ್ಮ ಕಾಲದಲ್ಲಿ ಹೇಗೆ ಮಾಡ್ತಿದ್ರಿ? ಆವಾಗ ಮಿಕ್ಸಿ ಗ್ರೈಂಡರ್ ಏನೂ ಇರ್ಲಿಲ್ಲ ಅಲ್ವಾ?" ಅಂತ ಸವಾಲು ಹಾಕಿದ.

ನಾಣಿ ಭಟ್ರು ಮುಖ ಅರಳಿತು. "ಇದೊಂದು ಸಾರಿ ಸರಿಯಾದ ಸಮಯದಲ್ಲಿ ಸರಿಯಾದ ಪ್ರಶ್ನೆ ಕೇಳಿದ್ದೀಯಾ ನೀನು. ಶಭಾಷ್ !!" ಅಂತ ಅವನ ಬೆನ್ನು ತಟ್ಟಿದರು.  ಹಾಗೆಯೇ ಗಿರಿ ಭಟ್ರ ಕಡೆಗೆ "ಭಟ್ರೇ ಆ ದೊಡ್ಡ ರುಬ್ಬೋ ಕಲ್ಲು ಇತ್ತಲ್ಲ. ಅದನ್ನು ಉಪಯೋಗಿಸಿದ್ರೆ ಹೇಗೆ? ಬೇಗನೇ ಆಗ್ಬಿಡುತ್ತೆ"

ಗಿರಿ ಭಟ್ರು ನಾಣಿ ಭಟ್ರಷ್ಟು ಸಂತಸ ಪಡಲಿಲ್ಲ. "ಉಪಾಯ ಏನೋ ಒಳ್ಳೇದೇ. ಆದರೆ ಅದು ತುಂಬ ದೊಡ್ಡ ಕಲ್ಲು. ನಂಗೆ ಒಬ್ನಿಗೆ ಎಲ್ಲಿ ತಿರುಗಿಸೋಕ್ಕೆ ಆಗುತ್ತೆ. ನಿಮ್ಮಪ್ಪನ ಕಾಲದಲ್ಲಿ ಮೂರು ಮಂದಿ ಬರೇ ರುಬ್ಬೋ ಕೆಲಸಕ್ಕೆ ಇಟ್ಟಿದ್ರು. ಈವಾಗ ನಾನು ಮತ್ತೆ ಶಂಕ್ರ ಇಬ್ರೇ ಇರೋದು. ಆಗೋ ಮಾತಲ್ಲ ಬಿಡಿ" ಅಂತ ನಿರಾಸೆ ಪಟ್ಟರು.

ನಾಣಿ ಭಟ್ರು"ಛೆ! ನಾವಿಲ್ವಾ ಇಲ್ಲಿ. ನೀವು ಒಂದು ಕೆಲ್ಸ ಮಾಡಿ. ಮಸಾಲೆಗೆ ಬೇಕಾಗಿರೋ ಸಾಮಾಗ್ರಿ ಎಲ್ಲ ಕೊಟ್ಟು ಕಳಿಸಿ. ಹತ್ತೇ ನಿಮಿಷದಲ್ಲಿ ರುಬ್ಬಿ ಕೊಡುತ್ತೀವಿ" ಅಂತ ಭರವಸೆಯಿತ್ತರು. ಸರಿಯೆಂದು ತಲೆಯಲ್ಲಾಡಿಸಿ ಗಿರಿ ಭಟ್ರು ಅಡುಗೆ ಮನೆಯತ್ತ ನಡೆದರು.

ಹರ್ಷ ಕ್ಯಾಂಟೀನ್ ಎರಡು ಸುತ್ತು ಹೊಡೆದು ರುಬ್ಬೋ ಕಲ್ಲು ಇಟ್ಟಿರೋ ಜಾಗ ಕಂಡು ಹಿಡಿದು ಬಂದ. ಸುಮಾರು ಕಾಲ ಹಾಗೇ ಇಟ್ಟಿದ್ದರಿಂದ ಧೂಳು ಹಬ್ಬಿತ್ತು. ದೊಡ್ಡ ಕಲ್ಲು ಮಗುಚಿ ಬಿದ್ದಿತ್ತು, ಸಣ್ಣ ಕಲ್ಲು ಸ್ವಲ್ಪ ದೂರದಲ್ಲಿ ಕೆಸರಲ್ಲಿ ಬಿದ್ದಿತ್ತು. ಹಾಗೋ ಹೀಗೋ ಮಾಡಿ ನಾಣಿ ಭಟ್ರು, ಹರ್ಷ, ಆನಂದ ಮತ್ತು ರಾಜಣ್ಣ ಸೇರಿ ದೊಡ್ಡ ಕಲ್ಲನ್ನು ಮತ್ತೆ ಸರಿ ಆಯಾಮಕ್ಕೆ ತಂದರು. ಎರಡೂ ಕಲ್ಲಿನ ಮೇಲೆ ನೀರಿನಿಂದ ಹೊಡೆದು ಸ್ವಚ್ಚಗೊಳಿಸಿದರು. ದೊಡ್ಡ ಕಲ್ಲಿನ ಸುತ್ತುವರೆದು ನಾಣಿ ಭಟ್ರು, ಹರ್ಷ ಹಾಗೂ ಆನಂದ ಕುಳಿತುಕೊಂಡರು. ಸಣ್ಣ ಕಲ್ಲು ದೊಡ್ಡ ಕಲ್ಲಿನ ಮಧ್ಯೆ ಇರುವ ಗುಂಡಿಯನ್ನು ಸರಿಹೊಂದಿ ಕುಳ್ಳಿರಿಸಿದರು. ಅಷ್ಟರಲ್ಲಿ ಗಿರಿ ಭಟ್ರು ಹುರಿದ ಮಸಾಲೆ ಪದಾರ್ಥ, ತುರಿದ ಕೊಬ್ಬರಿ, ಸ್ವಲ್ಪ ಹುಳಿ ತಂದು ಗುಂಡಿಯಲ್ಲಿ ಸುರಿದರು. ನಾಣಿ ಭಟ್ರು ಸಣ್ಣ ಕಲ್ಲಿನ ಮೇಲಿನ ಮರದ ಕೈಯ್ಯನ್ನು ಹಿಡಿದು ಒಂದು ಸುತ್ತು ತಿರುಗಿಸಿ ಹರ್ಷನ ಕೈಗೆ ಕೊಟ್ಟರು. ಅವನು ಕೂಡ ತಂದೆಯನ್ನು ಅನುಸರಿಸಿ ಒಂದು ಸುತ್ತು ತಿರುಗಿಸಿ ಆನಂದನ ಕೈಗೆ ಕೊಟ್ಟನು. ಹೀಗೆ ಚಕ್ರ ಬಂಡಿ ಶುರುವಾಯಿತು.

ಹತ್ತಾರು ಸುತ್ತುಗಳ ಬಳಿಕ ಆನಂದನ ಕೈಗಳು ನೋಯತೊಡಗಿದವು. ಸ್ವಲ್ಪ ಕಿರಿಕಿರಿಯಿಂದಲೇ ನುಡಿದನು "ಅಪ್ಪಾ, ನೀವು ಯಾಕೆ ಪಾಪಮ್ಮನಿಗೆ ಏನೂ ಹೇಳೋದಿಲ್ಲ. ಸುಮ್ಮನೆ ಮನೆಯಲ್ಲಿ ಕೂರಬೇಕಿತ್ತು ಅವಳು. ಈ ಕಷ್ಟನೇ ಬರುತ್ತಿರಲಿಲ್ಲ. ಚಟ್ನಿ ಮಾಡಲಿಲ್ಲ ಅಂತ ರಂಪ ಮಾಡ್ತಿದ್ಲಂತೆ ಬೆಳಿಗ್ಗೆ. ಪಾಪ ಭಟ್ರು ಬೇಜಾರಾಗಿ ಹೇಳ್ತಾ ಇದ್ದರು ಆವಾಗ."

ಭಟ್ರು "ಛೇ ! ಅಲ್ಲೇ ನಾವು ತಪ್ಪು ಮಾಡುವುದು. ನಿಮ್ಗೇನ್ ಅನ್ಸುತ್ತೆ ಪಾಪಮ್ಮ ರಂಪ ಮಾಡಿದ್ದು ಚಟ್ನಿಗೋಸ್ಕರನಾ? ಅಲ್ಲ. ಅವಳ ಹೋರಾಟ ನಮ್ಮ ಕೆಲಸದವರ ಹಕ್ಕಿಗಾಗಿ. ಅವರಿಗೆ ಸಿಗಬೇಕಾಗಿದ್ದು ನ್ಯಾಯಬದ್ಧವಾಗಿ ಸಿಗಬೇಕು ಅಂತ. ಇವತ್ತು ಚಟ್ನಿ ಸಣ್ಣ ಉದಾಹರಣೆ ಇರಬಹುದು. ಆದರೆ ಇಂತಹ ಸಣ್ಣ ಸಣ್ಣ ಘಟನೆಗಳಿಂದಲೇ ನಮ್ಮ ಯೋಚನೆ ನಿರ್ಮಾಣವಾಗೋದು. ನಾವು ಕೂಡ ಅವರನ್ನು ಕೆಲಸದವರು ಅಂತ ನಿರ್ಲಕ್ಷ ಮಾಡ್ತೀವಿ. ನಾವೇನೇ ಹೇಳಿದ್ರೂ ಕೇಳ್ತಾರೆ ಅಂತ ನಮಗೆ ಹೇಗೆ ಬೇಕೋ ಹಾಗೆ ಅವರನ್ನು ಉಪಯೋಗಿಸಿಕೊಳ್ತೇವೆ. ಅವರೂ ಕೂಡ ಇದಕ್ಕೆ ಒಗ್ಗಿ ಹೋಗಿ ಬಿಡ್ತಾರೆ. ಆದರೆ ಈ ಯಜಮಾನ-ಉದ್ಯೋಗಿ ಎಂಬ ಸಂಬಂಧದ ಚೌಕಟ್ಟಿನಲ್ಲೂ ಅವರಿಗೇ ಆದ ಒಂದು ಸ್ವಾತಂತ್ರ ಇದೆ, ಹಕ್ಕು ಇದೆ. ಪಾಪಮ್ಮ ಇದನ್ನು ನಮಿಗೂ ಅವರಿಗೂ ನೆನಪಿಸೋ ಕೆಲಸ ಮಾಡ್ತಿದ್ದಾಳೆ ಅಷ್ಟೇ. ಅವರಿಗೆ ಪಾಪಮ್ಮ ಬರಿ ಮ್ಯಾನೇಜರ್ ಮಾತ್ರ ಅಲ್ಲ, ತಮ್ಮ ಬೆಂಬಲವಾಗಿ ಯಾರೋ ಇದ್ದಾರೆ ಅಂತ ಜ್ಞಾಪಿಸೋ ಶಕ್ತಿ. ಇಂತಹ ಸಣ್ಣ ಉದಾಹರಣೆಗಳಿಂದಲೇ ಅವರಿಗೆ ನಮ್ಮ ಮೇಲೆ ನಂಬಿಕೆ ಧೃಡವಾಗೋದು. ಅಂತಹ ನಂಬಿಕಸ್ಥ ಜನರಿಂದಲೇ ಕಾರ್ಖಾನೆ ಬೆಳಿಯೋದು. ನಾಳೆ ನೀವೂ ಅಷ್ಟೆ, ನಿಮ್ಮ ಸ್ವಾಭಿಮಾನ, ಸ್ವಾತಂತ್ರಕ್ಕೆ ಧಕ್ಕೆ ಬರೋ ಕಡೆ ಕೆಲಸ ಮಾಡಬಾರದು. ತಿಳೀತಾ?"

ಮಾತು ಮಾತಿನ ನಡುವೆ ಮೂರೂ ಜನ ಸೇರಿ ಒಂದೊಂದಾಗಿ ಸರದಿಯಲ್ಲಿ ರುಬ್ಬಿ ಮಸಾಲೆ ತಯಾರಾಯಿತು. ಗಿರಿ ಭಟ್ರು ಮುಂದಿನ ಕೆಲಸ ನೋಡ್ಕೊಂಡ್ರು. 

ದೃಶ್ಯ ೪:

ಮೂರೂ ಜನ ರುಬ್ಬೋ ಕೆಲಸ ಮುಗಿಸಿ ಕಾರ್ಖಾನೆಯೊಳಕ್ಕೆ ಬರುತ್ತಿದ್ದಂತೆ ಕೆಲಸದ ಹೆಂಗಸರ ಗುಂಪು ಒಂದು ಕಡೆ ಒಟ್ಟಾಗಿರುವುದನ್ನು ಕಂಡರು. ನಾಣಿ ಭಟ್ರು "ಅಯ್ಯೋ ಪಾಪಮ್ಮ ಇನ್ಯಾರತ್ರ ಜಗಳ ತೆಗೆದಳೋ?" ಅಂತ ಆ ಕಡೆ ವೇಗವಾಗಿ ಹೆಜ್ಜೆ ಇಟ್ಟರು. ಆದರೆ ಅಲ್ಲಿ ಹೋದಾಗಲೆ ತಿಳೀತು, ಅಲ್ಲೇನೂ ಜಗಳ ನಡೆಯುತ್ತಿಲ್ಲ ಅಂತ. ಬದಲಾಗಿ ಹೆಂಗಸರೆಲ್ಲ ಮುಸು ಮುಸು ನಗುತ್ತಿದ್ದರು. ಪಾಪಮ್ಮ ಆಫೀಸು ಫೋನ್ ಕೈಗೆತ್ತಿರುವುದು ಕಂಡಿತು. ರಾಜಣ್ಣ ಬದಿಯಿಂದ ನಗುತ್ತಲೇ ಪಿಸುಗುಡುತ್ತಾ ನುಡಿದರು "ಕೆಇಬಿ ಹತ್ರ ಮಾತಾಡುತ್ತ ಇದ್ದಾಳೆ ಪಾಪಮ್ಮ. ಆ ಕಡೆ ಯಾರೋ ಹೊಸಬ ಅನ್ಸುತ್ತೆ. ಪಾಪಮ್ಮನ ಪ್ರಶ್ನೆಗಳಿಗೆ ಅತ್ತೇ ಬಿಟ್ಟ, ಅವನು ಸುರ್ವೈಸರ್ ಹತ್ರ ಮಾತಾಡಿ ಅಂತ ತಪ್ಪಿಸ್ಕೊಂಡ."

ಆನಂದ "ಸುಪ್ರೈಸರ್"

ನಾಣಿ ಭಟ್ರು "ಸುಪ್ರವೈಸರ್"

ಹರ್ಷ "ಸುಪರ್ವೈಸರ್ ಮರಾಯರೆ ಅದು"

ಪಾಪಮ್ಮನ ಮಾತು ಮತ್ತೆ ಶುರುವಾಯಿತು "ಓ ನೀನೇನಾ ಸುಪರ್ವೈಸರ್. ಅಲ್ಲಾ ಬೆಳಿಗ್ಗೆ ಫೋನ್ ಮಾಡಿದಾಗ ಕರೆಂಟ್ ಇರುತ್ತೆ ಅಂತ ಹೇಳಿದ್ದಕ್ಕೆ ನಾವು ಮಶೀನುಗಳನ್ನೆಲ್ಲ ರೆಡಿ ಮಾಡಿ ಕಾಯ್ಕೊಂಡಿದ್ರೆ, ಈಗ ನೀವು ಆ ಲೈನ್ ಬೇರೆ ಈ ಲೈನ್ ಬೇರೆ ಅಂತ ರಾಗ ಹಾಡ್ತಾ ಇದ್ದೀರಾ. ಸರಿಯಾಗಿ ನೋಡ್ಬೇಕೋ ಬೇಡ್ವೋ ಯಾವ ಲೈನ್ ಅಂತ. ಈಗ ಕೆಲಸದವರೆಲ್ಲ ಖಾಲಿ ಕೂತಿದ್ದಾರೆ, ಏನು ಮಾಡೋದು ಅವರೀಗ."

ಆ ಕಡೆಯಿಂದ ಸುಪರ್ವೈಸರ್ ಅಸಮಾಧಾನ ವ್ಯಕ್ತ ಪಡಿಸಿದ ಅನ್ಸುತ್ತೆ, ಪಾಪಮ್ಮ ಮಾತು ಜೋರಾಯಿತು 

"ಮನೇಗೆ ಕಳಿಸೋದಾ ! ಏನೂ ಕೆಲಸ ಮಾಡದೇ ಮನೇಗೆ ಹೋದ್ರೆ ಸಂಬಳ ಯಾರು ಕೊಡ್ತಾರೆ. ನಿಮ್ಮ ತಾತ ಕೊಡ್ತಾನಾ?"

ಆ ಕಡೆಯಿಂದ ಮತ್ತೆ ಏನೋ ಮಾತು ಬಂತು.

"ಏನು ಕೆಲಸ ಮಾಡ್ತಿರೋ. ಯಾವ ಲೈನ್ ಸರಿ ಇದೆ ಅಂತ್ಲೇ ಗೊತ್ತಿಲ್ಲ ನಿಮಗೆ. ಸಾಲದ್ದಕ್ಕೆ ಅದನ್ನು ಪೇಪರಲ್ಲಿ ಬೇರೆ ಹಾಕಿಸ್ತೀರಾ. ನಾವಿಲ್ಲಿ ಕಾಯ್ಕೊಂಡು ಕೂರಬೇಕು ಬರುತ್ತೋ ಇಲ್ವೋ ಅಂತ."

ಆ ಕಡೆಯಿಂದ ಮತ್ತೆ ದನಿ ಬಂತು. ಈ ಸಲ ಸ್ವಲ್ಪ ಸಮಾಧಾನವಾಗಿ.

"ಬರ್ಲಿಲ್ಲ ಅಂದ್ರೆ ಕೆಇಬಿಗೆ ಬಂದು ಮಾತಾಡುತ್ತೇನೆ. ಸರಿ ಇಡು ಈಗ ಫೋನ್"

ಕೆಲಸದ ಹೆಂಗಸರ ಜೊತೆ ಪಾಪಮ್ಮನೂ ಸಣ್ಣಗೆ ಮುಗುಳ್ನಕ್ಕಳು. ನಾಣಿ ಭಟ್ರನ್ನು ಕಂಡು ಪಾಪಮ್ಮ ಕೂಡಲೇ "ಹಾಂ ಸರಿ ಎಲ್ಲಾ ಹೋಗಿ ಸಿನೆಮಾ ಮುಗೀತು. ಅರ್ಧ ಘಂಟೇಲಿ ಬರುತ್ತೆ ಅಂತೆ. ನಿಮ್ಮೆಲ್ಲರಿಗೂ ಏನೂ ಕಮ್ಮಿ ಆಗದಂತೆ ವ್ಯವಸ್ಥೆ ಮಾಡಿದ್ದಾನೆ ನಾಣಿ. ಎಲ್ರೂ ಸ್ವಲ್ಪ ಹೊತ್ತು ಜಾಸ್ತಿ ಉಳ್ಕೊಂಡು ಅರ್ಧ ಕೆಲಸ ಮಾಡಿ ಮನೆಗೆ ಹೋಗಬೇಕು." ಯಾರೂ ತುಟಿಕ್ ಪಿಟಿಕ್ ಅನ್ನಲಿಲ್ಲ.  

ಹರ್ಷ ಹಾಗೂ ಆನಂದ ಮುಖ ಮುಖ ನೋಡಿಕೊಂಡರು. ಇಬ್ಬರಿಗೂ ಅರಿವಾಗಿತ್ತು ಪಾಪಮ್ಮನ ಪ್ರಾಮುಖ್ಯತೆ.

ದೃಶ್ಯ ೫:

ನಾಣಿ ಭಟ್ರು ಮತ್ತು ಮಕ್ಕಳು ಮನೆ ಜಗಲಿಯಲ್ಲಿ ಕುಳಿತು ನಡೆದುದ್ದನ್ನೆಲ್ಲಾ ಸುಶೀಲಾಗೆ ವಿವರಿಸತೊಡಗಿದರು. ಆನಂದ ಕುಷಿಯಾಗಿ "ನಾನು ಕೊಟ್ಟ ರುಬ್ಬೋ ಕಲ್ಲಿನ ಐಡಿಯಾದಿಂದ ಬಚಾವಾದ್ವಿ ಇವತ್ತು. ಇಲ್ಲಾಂದಿದ್ರೆ ಆ ಪಾಪಮ್ಮ ನಮ್ಮನ್ನೆಲ್ಲ ರುಬ್ಬುತ್ತಿದ್ದಳು."

ಹರ್ಷ "ಐಡಿಯಾ ಅಪ್ಪಂದು. ನೀನು ಕೇಳಿದ್ದು ಬರೇ ತರ್ಲೆ ಪ್ರಶ್ನೆ."

ಆನಂದ "ಅದೇನೆ ಇರಲಿ. ನನ್ನ ಪ್ರಶ್ನೆಯಿಂದ್ಲೇ ತಾನೆ ಐಡಿಯಾ ಬಂದಿದ್ದು."

ಹರ್ಷ "ನೀನು ಫೋನ್ ಸರಿ ಚಾರ್ಜಿಗೆ ಇಟ್ಟಿದಿದ್ರೆ ಇಷ್ಟೆಲ್ಲ ಗೊಂದಲ ಆಗುತ್ತಾ ಇರಲಿಲ್ಲ."

ನಾಣಿ ಭಟ್ರು "ಶುರು ಆಯಿತಾ ನಿಮ್ಮ ಜಗಳ. ಏನೇ ಇರಲಿ, ಆನಂದನ ಪ್ರಶ್ನೆಯಿಂದ ಒಳ್ಳೆ ಕೆಲಸ ಆಯಿತು. ಅದಕ್ಕೆ ಅವನಿಗೆ ಚಾರ್ಜಿನ ವಿಷಯಕ್ಕೆ ಕ್ಷಮೆ ಇವತ್ತು."

ಸುಶೀಲಾ "ಆದ್ರೆ ನನಗೇನೋ ಸಂಶಯ. ಬೆಳಿಗ್ಗೆ ಪ್ಲಗ್ ಹಾಕದೇ ಟಿವಿ ಹಾಕ್ತಾ ಇದ್ದ. ಮಧ್ಯಾಹ್ನ ಸ್ವಿಚ್ ಹಾಕದೆ ಫೋನ್ ಚಾರ್ಜ್ ಮಾಡೋಕೆ ಹೊರಟಿದ್ದ. ನನಗನ್ಸುತ್ತೆ ಇವನ ತಲೆಯಲ್ಲಿ ಯಾವುದೋ ಒಂದು ವೈರ್ ಲೂಸ್ ಆಗಿದ್ಯೇನೋ ಅಂತ."

ಎಲ್ಲರೂ ಮನಸ್ಪೂರ್ತಿ ನಕ್ಕರು. ಆನಂದ ಕೂಡ. 


===================       ಶುಭಂ      ========================

Comments